ಬೆಂಗಳೂರು, ಜು.19: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸಭೆಯಲ್ಲಿ ಈ ಕುರಿತು ಉತ್ತರ ನೀಡಿ ಮಾತನಾಡಿದ ಸಿಎಂ, ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು,ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬಿಜೆಪಿ ಯವರ ಹುನ್ನಾರ ಇಷ್ಟೆ. ಒಂದು, ಮುಖ್ಯಮಂತ್ರಿಯ ಹೆಸರಿಗೆ ಮಸಿ ಬಳಿಯುವುದು, ಎರಡನೆಯದು, ಸರ್ಕಾರ ಪರಿಶಿಷ್ಟ ಜಾತಿ/ ಪಂಗಡಗಳ ವಿರುದ್ಧ ಎಂದು ಬಿಂಬಿಸುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಎರಡೂ ಎಂದಾದರೂ ಸಾಧ್ಯವೆ ಎಂದು ಪ್ರಶ್ನಿಸಿದ ಸಿದ್ದು, ಇಡೀ ಬಿಜೆಪಿ, ಬಿಜೆಪಿಯ ನಾಯಕತ್ವ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ದಮನಿತ ಸಮುದಾಯಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ದ, ಮಹಿಳೆಯರ ವಿರುದ್ಧವಾಗಿವೆ ಎಂದು ಟೀಕಿಸಿದರು.
ದಮನಿತರ ಪರವಾದ ಪ್ರತಿ ನಿಲುವು, ಪ್ರತಿ ಕಾಯ್ದೆ, ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರಗಳೇನೆ ಎಂದು ಹೇಳಿದರು.
ಇದೇ ಬಿಜೆಪಿ ಆಡಳಿತದಲ್ಲಿದ್ದಾಗ ಯಾವ ಯಾವ ನಿಗಮಗಳಲ್ಲಿ ಏನೇನೆಲ್ಲ ನುಂಗಿದ್ದಾರೆ ಎಂಬ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ನುಂಗುವುದರಲ್ಲಿ ಜಾಣರಾಗಿರುವ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಇದಕ್ಕಿಂತ ದುರಂತ ಬೇರೆ ಇಲ್ಲ ಎಂದು ವ್ಯಂಗ್ಯ ವಾಡಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈ 89.63 ಕೋಟಿಗಳಷ್ಟು ಹಣ ಅಕ್ರಮವಾಗಿ ಹೈದರಾಬಾದಿನ ಆರ್ ಬಿ ಎಲ್ ಬ್ಯಾಂಕಿಗೆ ವರ್ಗಾವಣೆಯಾಗಿರುತ್ತದೆ. [ಈ 89.63 ಕೋಟಿಗಳಲ್ಲಿ 5 ಕೋಟಿ ರೂ ವಾಪಸ್ಸು ಬಂದಿರುತ್ತದೆ]. 89.63 ಕೋಟಿ ರೂಪಾಯಿಗಳಲ್ಲಿ 45,02,98,000 ರೂಪಾಯಿಗಳು ಉಳಿತಾಯ ಖಾತೆಯಿಂದ ವರ್ಗಾವಣೆಯಾಗಿರುತ್ತವೆ. ಇನ್ನುಳಿದ 44.60 ಕೋಟಿ ರೂಪಾಯಿಗಳನ್ನು ನಿಗಮವು ಇಟ್ಟಿದ್ದ ಫಿಕ್ಸೆಡ್ ಡಿಪಾಸಿಟ್ ಮೇಲೆ ಓವರ್ ಡ್ರಾಫ್ಟ್ ತೆಗೆದಿದ್ದಾರೆ.
ಓವರ್ ಡ್ರಾಫ್ಟ್ ಎಂದರೆ ಒಂದು ರೀತಿಯ ಸಾಲವೇ ಆಗಿದೆ. ಇದು ಅತ್ಯಂತ ಪರಿಣತರಾದ, ಪಳಗಿದ ಖದೀಮರ ಕೆಲಸ. ನಿಗಮವು 30-3-2024 ರಂದು 50.00 ಕೋಟಿ ರೂಪಾಯಿಗಳನ್ನು ಫಿಕ್ಸೆಡ್ ಡಿಪಾಸಿಟ್ ನಲ್ಲಿಟ್ಟಿದೆ, ಈ 50.00 ಕೋಟಿ ಫಿಕ್ಸೆಡ್ ಡಿಪಾಸಿಟ್ ನಮ್ಮ ವಶದಲ್ಲಿಯೆ ಇದೆ, ಯಾಕೆಂದರೆ ಅದು ಫಿಕ್ಸೆಡ್ ಡಿಪಾಸಿಟ್ ಎಂದು ಸಿಎಂ ವಿವರಿಸಿದರು.
ವಿರೋಧ ಪಕ್ಷದವರು ಹೇಳಿದ ಎರಡನೆ ಸುಳ್ಳು ರಾಜ್ಯ ಸರ್ಕಾರ ಸಿಬಿಐ ನವರು ಎಫ್‌ಐಆರ್ ದಾಖಲಿಸಿದ ಮೇಲೆ ಎಸ್ಐಟಿ ರಚಿಸಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ 28-5-2024 ರಂದು ಏಫ್ ಐ ಆರ್ ದಾಖಲಾಗಿದೆ. ರಾಜ್ಯ ಸರ್ಕಾರವು 31-5-2024 ರಂದು ಆದೇಶ ಹೊರಡಿಸಿ ಎಸ್ಐಟಿ ರಚಿಸಿದೆ. ಸಿಬಿಐನವರು 3-6-2024 ರಂದು ಎಫ್‌ಐಆರ್ ದಾಖಲಿಸಿದ್ದಾರೆ.
03.06.2024 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ (ಹೆಚ್.ಆರ್.) ಗಿರೀಶ್ ಚಂದ್ರ ಜೋಶಿ ಎನ್ನುವವರು ಎಂ.ಜಿ. ರಸ್ತೆ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸುಚಿಸ್ಮಿತಾ ರಾವುಲ್, ಚೀಫ್ ಮ್ಯಾನೇಜರ್ (ಬ್ರಾಂಚ್ ಹೆಡ್) ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಹಾಗೂ ಅನುಮತಿ ನೀಡಿ ಸಿ.ಬಿ.ಐ. ಗೆ ಪತ್ರ ಬರೆದಿರುತ್ತಾರೆ.
ಸಿ.ಬಿ.ಐ.ಗೆ ಬರದಿರುವ ಈ ಪತ್ರದ ಮುಖ್ಯಾಂಶಗಳನ್ನು ನಾನು ಅನುಬಂಧ-1 ರಲ್ಲಿಟ್ಟು ಸದನದಲ್ಲಿ ಮಂಡಿಸುತ್ತಿದ್ದೇನೆ. ಈ ಎರಡರಲ್ಲೂ ಬ್ಯಾಂಕಿನವರೆ ಒಪ್ಪಿಕೊಂಡಿರುವ ಹಾಗೆ ಬ್ಯಾಂಕಿನ ಸಿಬ್ಬಂದಿಗಳೇ ನೇರವಾಗಿ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬುದು ಕಂಡುಬರುತ್ತದೆ ಎಂದು ಸಿದ್ದರಾಮಯ್ಯ ವಿವರ ನೀಡಿದರು.
ವಿರೋಧ ಪಕ್ಷದವರಿಗೆ ನಾನು ಕೇಳಬಯಸುವುದೇನೆಂದರೆ, ಯೂನಿಯನ್ ಬ್ಯಾಂಕು ರಾಷ್ಟ್ರೀಕೃತ ಬ್ಯಾಂಕೊ ಅಥವಾ ಖಾಸಗಿ ಬ್ಯಾಂಕೊ? ರಾಷ್ಟ್ರೀಕೃತ ಬ್ಯಾಂಕು ಹೌದಾದರೆ ಕೇಂದ್ರದ ಯಾವ ಇಲಾಖೆಯ ಕೆಳಗೆ ಬರುತ್ತದೆ? ಹಣಕಾಸು ಇಲಾಖೆಯ ಕೆಳಗೆ ತಾನೆ? ಹಣಕಾಸು ಇಲಾಖೆ ಯಾರ ಅಧೀನದಲ್ಲಿದೆ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಗರಣದ ಜವಾಬ್ಧಾರಿಯನ್ನು ಹೊರುತ್ತಾರೆಯೆ ಎಂದು ಸಿದ್ದು ಪ್ರಶ್ನಿಸಿದರು.