ಮೈಸೂರು, ಮಾ.11: ಅಂಗಡಿ,ಮಳಿಗೆಗಳಲ್ಲಿ
ಕನ್ನಡ ನಾಮಪಲಕ ಅಳವಡಿಸುವ ಕುರಿತು
ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಯಿತು.
ಜಾಗೃತಿ ಸಪ್ತಾಹ ಅಂಗವಾಗಿ ವಾಟಾಳ್ ನಾಗರಾಜ್ ಅವರು ಮೈಸೂರಿನ ಹಾರ್ಡಿಂಜ್ ಸರ್ಕಲ್ ನಿಂದ ಕೋಟೆ ಆಂಜನೇಯ ದೇವಸ್ಥಾನದ ಮಾರ್ಗವಾಗಿ ಸಾಗಿ,ದೊಡ್ಡ ಗಡಿಯಾರ,ಸಯ್ಯಾಜಿರಾವ್ ರಸ್ತೆ ನಂತರ ಡಿ .ದೇವರಾಜ ಅರಸು ರಸ್ತೆಯ ಮುಖಾಂತರ ತೆರಳಿ, ಎಲ್ಲೆಲ್ಲಿ ಕನ್ನಡ ನಾಮಪಲಕಗಳಿರಲಿಲ್ಲವೋ, ಆ ಅಂಗಡಿ ಮಾಲೀಕರನ್ನು ಕರೆಸಿ ಅವರಿಗೆ ತಿಳಿ ಹೇಳಿ ಒಂದು ವಾರದೊಳಗೆ ಕಡ್ಡಾಯವಾಗಿ ಪ್ರಧಾನವಾಗಿ ಶೇ.60 ಭಾಗ ಕನ್ನಡ ನಾಮಪಲಕಗಳನ್ನು ಹಾಕಲೇಬೇಕೆಂದು ಗಡುವು ನೀಡಿದರು.
ಈ ಸಪ್ತಾಹ ಕಾರ್ಯಕ್ರಮದಲ್ಲಿ ಕರುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಸವರಾಜು, ಕನ್ನಡ ಚಳವಳಿಗಳ ಮುಖಂಡರಾದ ಬಿ.ಎ ಶಿವಶಂಕರ್, ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕರ್ನಾಟಕ ಪತಿಧ್ವನಿ ವೇದಿಕೆ ಜಿಲ್ಲಾಧ್ಯಕ್ಷ ಮಧುವನ ಚಂದು, ನಗರಸಭಾ ಸದಸ್ಯರಾದ ಆನಂದ್, ತಾಯೂರು ವಿಠಲ ಮೂರ್ತಿ, ಹನುಮಂತಯ್ಯ, ಪ್ರಭಾಕರ ಮತ್ತಿತರರು ಭಾಗವಹಿಸಿದ್ದರು.