ನಂಜನಗೂಡು,ಆ.3: ಕುಡಿಯುವ ನೀರಿಲ್ಲ,ಬೀದಿ ದೀಪಗಳು ಕೆಟ್ಟಿವೆ,ಕಸದ ರಾಶಿ ತುಂಬಿದೆ ಎಂದು ಬಂಡೀಪುರ ರಾಷ್ಟ್ರೀಯ
ಉದ್ಯಾನವನದ ಅಂಚಿನಲ್ಲಿರುವ ವೆಂಕಟಗಿರಿ ಕಾಲೋನಿ ಜನ ಕಿಡಿ ಕಾರಿದ್ದಾರೆ.
ಮೂಲ ಸೌಕರ್ಯಗಳನ್ನ ಒದಗಿಸುವಂತೆ ಮಾಡಿದ ಮನವಿಗಳು ಪ್ರಯೋಜನವಿಲ್ಲ ಎಂದು ಅಧಿಕಾರಿಗಳಿಗೆ ಇಲ್ಲಿನ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ನಾವು ಮೂಲ ಸೌಕರ್ಯಗಳು ಇಲ್ಲದೆ ರೋಸಿಹೋಗಿದ್ದೇವೆ ಹಾಗಾಗಿ ಪ್ರತಿಭಟನೆ ಹಾದಿ ಹಿಡಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ಕುಡಿಯುವ ನೀರು ಸರಬರಾಜು ಮಾಡುವ ಮೋಟರ್ ಕೆಟ್ಟು ನಿಂತು ತಿಂಗಳುಗಳು ಕಳೆದಿದೆ. ಬೀದಿ ದೀಪ ಇಲ್ಕದೆ ಕಗ್ಗತ್ತಲು ಆವರಿಸಿದೆ,ಸ್ವಚ್ಛತೆಗೆ ಅಧಿಕಾರಿಗಳು ಆಧ್ಯತೆ ನೀಡಿಲ್ಲ.
ರಾತ್ರಿ ಮನೆಯ ಬಾಗಿಲಿನಲ್ಲೇ ಕ್ರೂರ ಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ. ಸಂಜೆ 6 ಗಂಟೆ ನಂತರ ಗುಡಿಸಿಲಿನಿಂದ ಹೊರಬರಲಾಗದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮ ಪಂಚಾಯಿತಿಗೆ ವೆಂಕಟಗಿರಿ ಕಾಲೋನಿ ಸೇರುತ್ತದೆ. ಇಲ್ಲಿ ತಲೆಮಾರುಗಳಿಂದ ನಲವತ್ತಕ್ಕೂ ಹೆಚ್ಚು ಕುಟುಂಬದ ಆದಿವಾಸಿ ಜನರು ವಾಸ ಮಾಡುತ್ತಿದ್ದಾರೆ.
ನಂಜನಗೂಡು ತಾಲೂಕಿನ ಕಟ್ಟ ಕಡೆಯ ಆದಿವಾಸಿ ಕಾಲೋನಿ ಇದು,ನೀರಿಗಾಗಿ ಮಹಿಳೆಯರು ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ತಾಲೂಕು ಕಚೇರಿ ಮುಂಭಾಗ ಕುಟುಂಬ ಸಮೇತರಾಗಿ ಪ್ರತಿಭಟನೆ ಕೈಗೊಳ್ಳುವುದಾಗಿ ಕಾಲೋನಿಯ ಜನ ಎಚ್ಚರಿಸಿದ್ದಾರೆ.