ಬೆಂಗಳೂರು: ಮಹಾನಗರಿ ಬೆಂಗಳೂರಿನ ಐಕಾನಿಕ್ ಹೋಟೆಲ್ ‘ವಿದ್ಯಾರ್ಥಿ ಭವನ’ ಈ ಬಾರಿ ಯುಗಾದಿಯನ್ನು ಬಹಳ ಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೋಟೆಲ್ನ ಅಡುಗೆಮನೆಯಲ್ಲಿ ಈ ಬಾರಿ ಕೇವಲ ಹಬ್ಬದ ಸಡಗರವಿರಲಿಲ್ಲ, ಬದಲಿಗೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ಹೇಗೆ ಹೊಂದಿಕೊಳ್ಳಬೇಕು ಎಂಬ ಸಂದೇಶವಿತ್ತು.
ಪೂಜೆಯಲ್ಲೂ ಪರ್ಯಾಯದ ಪ್ರತಿಬಿಂಬ:
ಸಾಮಾನ್ಯವಾಗಿ ಯುಗಾದಿಯಂದು ಮಾವು,ಬೇವಿನೊಂದಿಗೆ ಮನೆಯಲ್ಲಿ,ವ್ಯವಹಾರದ ಸ್ಥಳದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ವಿದ್ಯಾರ್ಥಿ ಭವನವು ಈ ಬಾರಿ ಪ್ರಸ್ತುತ ಎಲ್ಪಿಜಿ (LPG) ಬಿಕ್ಕಟ್ಟನ್ನು ಎದುರಿಸಲು ತಾನು ಬಳಸುತ್ತಿರುವ ಸೌದೆ ಒಲೆ (Firewood stove), ಇಂಡಕ್ಷನ್ ಸ್ಟೌವ್ ಮತ್ತು ಲಭ್ಯವಿರುವ ಸಿಲಿಂಡರ್ಗಳಿಗೆ ಒಟ್ಟಿಗೆ ಪೂಜೆ ಸಲ್ಲಿಸಿದೆ. ಈ ಚಿತ್ರಗಳು ಈಗ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿವೆ.
ಹಳೆಯ ಬೇರು – ಹೊಸ ಚಿಗುರು:
ಗ್ಯಾಸ್ ಸಿಲಿಂಡರ್ಗಳ ಕೊರತೆಯಿಂದಾಗಿ ಹೋಟೆಲ್ ಸುಮಾರು 45 ವರ್ಷಗಳ ಹಿಂದಿನ ತನ್ನ ಹಳೆಯ ಶೈಲಿಯ ಸೌದೆ ಒಲೆಗೆ ಮರಳಿದೆ. “ಕಷ್ಟಗಳು ಬಂದಾಗ ಹಳತನ್ನು ನೆನೆಯಬೇಕು, ಹೊಸತಕ್ಕೆ ಹೊಂದಿಕೊಳ್ಳಬೇಕು” ಎಂಬ ಯುಗಾದಿಯ ತತ್ವವನ್ನು ಹೋಟೆಲ್ ಆಡಳಿತ ಮಂಡಳಿ ಇಲ್ಲಿ ಸಾಬೀತುಪಡಿಸಿದೆ.
ಬದಲಾವಣೆಗೆ ಗೌರವ:
ವಿದ್ಯಾರ್ಥಿ ಭವನದ ಮಾಲೀಕ ಅರುಣ್ ಅಡಿಗ ಅವರು ಹೇಳುವಂತೆ, ಈ ‘ಪರಾಭವ’ ಸಂವತ್ಸರವು ನಮಗೆ ಸವಾಲುಗಳನ್ನು ನೀಡಿದೆ. ಈ ಸವಾಲುಗಳನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತಾ, ಬೆಲೆ ಏರಿಕೆ ಮತ್ತು ಇಂಧನ ಅಭಾವದ ನಡುವೆಯೂ ಗ್ರಾಹಕರಿಗೆ ರುಚಿಯಾದ ದೋಸೆ ನೀಡುವ ಅವರ ಸಂಕಲ್ಪಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

