Fri. Mar 6th, 2026

ಜಿಎಸ್ಟಿ ಅನ್ಯಾಯ ಆರೋಪ: ಸದನದಲ್ಲಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ ವಿಜಯೇಂದ್ರ

Share this with Friends

ಬೆಂಗಳೂರು: ಹಿಂದೆ ಈ ದೇಶದಲ್ಲಿ ಅಭಿವೃದ್ಧಿ ಕುರಿತು ಚರ್ಚೆಯೇ ಆಗುತ್ತಿರಲಿಲ್ಲ ಕೇವಲ  ಭ್ರಷ್ಟಾಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು ಆದರೆ ಇವತ್ತು ಈ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿಲ್ಲ.ಜಿಎಸ್‍ಟಿ ವಿಷಯದಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯ ಆಗುತ್ತಿದೆ ಎಂಬ ಚರ್ಚೆ ಆಗುತ್ತಿದೆ. ಆದರೆ, ದೇಶದಲ್ಲಿ 2014ರಿಂದ 2025ರ ನಡುವೆ ಆಗಿರುವ ಆಡಳಿತದಲ್ಲಿನ ಆಮೂಲಾಗ್ರ ಬದಲಾವಣೆ ಕುರಿತು ಯಾರೂ ಚರ್ಚೆ ಮಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ನಮ್ಮ ರಾಜ್ಯ ಮತ್ತು ಹೊರರಾಜ್ಯಗಳಿಂದ ತೆರಿಗೆ ಮೂಲಕ ಕೇಂದ್ರವು ಜಿಎಸ್‍ಟಿ ಸಂಗ್ರಹ ಮಾಡುತ್ತಿದೆ. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ, ಇಡೀ ದೇಶದಲ್ಲಿ 2 ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ, ಕಾಮನ್‍ವೆಲ್ತ್ ಗೇಮ್ಸ್ ಹಗರಣದ ಚರ್ಚೆ ಆಗುತ್ತಿತ್ತು. ಈ ದೇಶದಲ್ಲಿ ಅಭಿವೃದ್ಧಿ ಕುರಿತು ಚರ್ಚೆಯೇ ಆಗುತ್ತಿರಲಿಲ್ಲ. ಭ್ರಷ್ಟಾಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಅದರಲ್ಲೂ ವಿಶೇಷವಾಗಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರಕಾರ ಅಧಿಕಾರ ನಡೆಸುವ ನಂತರದಲ್ಲಿ ಇವತ್ತು ಈ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿಲ್ಲ. 2014ರಿಂದ 2025ರ ಅವಧಿಯಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ವಿರುದ್ಧ ಯಾವುದೇ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಕಾಂಗ್ರೆಸ್ಸಿನವರಿಗೆ ಸಾಧ್ಯವಾಗಿಲ್ಲ. ನರೇಂದ್ರ ಮೋದಿಯವರು ಆ ರೀತಿಯ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದನ್ನು ಈ ದೇಶದ ಜನರು ಚರ್ಚೆ ಮಾಡುತ್ತಿದ್ದಾರೆ ಎಂದು ಗಮನ ಸೆಳೆದರು.

ನಮ್ಮ ರಾಜ್ಯದಿಂದ ಜಿಎಸ್‍ಟಿ ತೆರಿಗೆ ಮೂಲಕ ಕೇಂದ್ರಕ್ಕೆ ಎಷ್ಟು ಮೊತ್ತ ಹೋಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ, ಆಡಳಿತ ಪಕ್ಷದವರ ಮಾತನ್ನು ಕೇಳುತ್ತಿದ್ದರೆ ನಮ್ಮ ರಾಜ್ಯದ ತೆರಿಗೆ ಹಣದಿಂದ ಕೇಂದ್ರ ಸರಕಾರವು ಬಹಳ ಭ್ರಷ್ಟಾಚಾರ ಮಾಡಿದೆ; ಲೂಟಿ ಮಾಡಿದೆ; ಈ ದೇಶದಲ್ಲಿ, ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಇದು ಒಂದು ರೀತಿ ಅರ್ಥಹೀನ.ಕೇಂದ್ರ ಸರಕಾರವು ಜಿಎಸ್‍ಟಿಯ ಲಕ್ಷಾಂತರ ಕೋಟಿ ಮೊತ್ತವನ್ನು ಬಂಡವಾಳವಾಗಿ ಹೂಡುತ್ತಿರುವ ಕುರಿತು ಚರ್ಚೆ ಮಾಡಬೇಕಿದೆ. ಮೋದಿಯವರ ಸರಕಾರವು ಈ ದೇಶದ ಮೂಲಭೂತ ಸೌಕರ್ಯ, ಭದ್ರತಾ ವ್ಯವಸ್ಥೆ, ಉದ್ಯೋಗ ಸೃಷ್ಟಿ ಕ್ಷೇತ್ರಕ್ಕೆ ಆದ್ಯತೆಯಿಂದ ಹಣ ನೀಡುತ್ತಿದೆ. ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರಕಾರವು ರಾಷ್ಟ್ರ ಮೊದಲು ಚಿಂತನೆಯಡಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಮುಂದಾಗಿದೆ ಎಂದು ವಿವರಿಸಿದರು.

ಇಡೀ ದೇಶದಲ್ಲಿ ಇವತ್ತು ನಕ್ಸಲಿಸಂ ಬಗ್ಗೆ ಚರ್ಚೆ ಆಗುತ್ತಿಲ್ಲ; 2014ರ ಮೊದಲಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ನಕ್ಸಲರು ಅಲ್ಲಿ ದಾಳಿ ಮಾಡಿದರು; ಇಲ್ಲಿ ಪೊಲೀಸರು ನಕ್ಸಲರಿಂದ ಸತ್ತರು; ಇಲ್ಲಿ ಬಡವರ ಪ್ರಾಣಹಾನಿ ಆಗಿದೆ ಎಂದು ಪ್ರಕಟವಾಗಿ ಚರ್ಚೆ ಆಗುತ್ತಿತ್ತು. 2014ರ ಪೂರ್ವದಲ್ಲಿ ಹಲವಾರು ರಾಜ್ಯಗಳಲ್ಲಿ ನಕ್ಸಲರ ಕಾಟ ತೀವ್ರವಾಗಿತ್ತು. ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿಯವರ ಸರಕಾರದ ನೀತಿಯಿಂದ, ಅಲ್ಲಿ ಹೆಚ್ಚು ಉದ್ಯೋಗಾವಕಾಶ ಸೇರಿ ಮೂಲಭೂತ ಸೌಕರ್ಯಗಳಿಂದ ನಕ್ಸಲರ ಸಮಸ್ಯೆ ಇಲ್ಲವಾಗಿದೆ ಎಂದು ಗಮನ ಸೆಳೆದರು.

ಹಿಂದೊಮ್ಮೆ 415 ಸಂಸದರ ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಇವತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 99 ಸ್ಥಾನಗಳಿಗೆ ತೃಪ್ತಿ ಪಡುವ ಸ್ಥಿತಿ ನಿರ್ಮಾಣವಾಗಿದೆ.ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಂಥ ಹೀನಾಯ ಪರಿಸ್ಥಿತಿ ಬಂದಿದೆ ಎಂದು ಒಂದು ಕ್ಷಣ ಯೋಚಿಸಬೇಕಾಗುತ್ತದೆ. ಹಿಂದೆ ಸೀತೆಯನ್ನು ರಾವಣ ಅಪಹರಿಸಿ ಲಂಕೆಗೆ ತೆಗೆದುಕೊಂಡು ಹೋದನೋ, ಅದೇ ರೀತಿ ಕಾಂಗ್ರೆಸ್ಸಿನವರು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಂಡಿದೆ. ಈ ನಕಲಿ ಕಾಂಗ್ರೆಸ್ ಪಕ್ಷವು, ಮಹಾತ್ಮ ಗಾಂಧಿಗೂ ಟೋಪಿ ಹಾಕುವ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ; ಬಡತನ ನಿರ್ಮೂಲನೆ ಮಾಡುತ್ತೇವೆ; ಗರೀಬಿ ಹಠಾವೋ ಎಂದು ಹೇಳಿ, ಈ ದೇಶದ ಬಡವರಿಗೂ ಮಕ್ಮಲ್ ಟೋಪಿ ಹಾಕುವ ಕೆಲಸವನ್ನು ಕಾಂಗ್ರೆಸ್ಸಿನವರು ಮಾಡಿದ ಪರಿಣಾಮವಾಗಿ ಇಂಥ ಹೀನಾಯ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ದೇಶ ಮತ್ತು ರಾಜ್ಯದಲ್ಲಿ ಬಂದಿದೆ ಎಂದು ನುಡಿದರು.


Share this with Friends

Related Post