ಮೈಸೂರು, ಮಾ.6: ದಕ್ಷಿಣಕಾಶಿ ಪ್ರಖ್ಯಾತಿಯ ನಂಜನಗೂಡು ಶ್ರೀ ನಂಜುಂಡೇಶ್ವರನ ಜಾತ್ರಾ ಮಹೋತ್ಸವ ಮಾ. 22ರಂದು ನಡೆಯಲಿದೆ.
ಜಾತ್ರೆಯ ಯಶಸ್ಸಿಗೆ ಸುತ್ತಲಿನ ಏಳು ಹಳ್ಳಿ ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕರಿಸಬೇಕೆಂದು ನಂಜನಗೂಡು ಶಾಸಕ ದರ್ಶನ್ ಧೃವನಾರಾಯಣ್ ಮನವಿ ಮಾಡಿದರು.
ನಂಜನಗೂಡು ಸುಕ್ಷೇತ್ರದ ದಾಸೋಹ ಭವನದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ನಡೆಯುವ ವೈಭವದ ಜಾತ್ರೆಗೆ ಹೊರರಾಜ್ಯ ಹಾಗೂ ಹೊರದೇಶಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸಲಿದ್ದು ಅವರುಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರ ಜತೆಗೆ ರಕ್ಷಣೆಯ ಜವಾಬ್ದಾರಿಯು ನಮ್ಮ ಮೇಲಿದೆ ಎಂದು ಹೇಳಿದರು.
ನಗರದ ರಸ್ತೆಗಳು, ವಿದ್ಯುತ್ ದೀಪಗಳು, ಜನಸಂದಣಿ ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಜನ ಸ್ನಾನಕ್ಕೆ ಇಳಿಯುವಲ್ಲಿ ಜಾಗ್ರತೆ ವಹಿಸುವುದು, ಮಕ್ಕಳು ಪೋಷಕರಿಂದ ತಪ್ಪಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮಾತನಾಡಿ, ಬಹಳ ಜನಸಂದಣಿ ಸೇರುವ ಜಾತ್ರಾ ಮಹೋತ್ಸವ ಇದಾಗಿದ್ದು, ಅನಧಿಕೃತ ವ್ಯಕ್ತಿಗಳ ಬಗೆಗೆ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.
ದೊಡ್ಡ ತೇರು ಎಳೆಯುವಾಗ ಜಾಗ್ರತೆ ಬಹಳ ಮುಖ್ಯ. ಏಳು ಗ್ರಾಮದ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ, ಮಹಿಳೆಯರು, ಮಕ್ಕಳು ಹಾಗೂ ಅವರ ಆಭರಣಗಳ ಬಗೆಗೆ ಎಚ್ಚರ ವಹಿಸಿ ಎಂದು ತಿಳಿಸಿದರು.
ಚೆಸ್ಕಾಂ ನವರು ಅನಿಯಂತ್ರಿತ ವಿದ್ಯುತ್ ಸರಬರಾಜಿನೊಂದಿಗೆ ವರ್ಣರಂಜಿತ ದೀಪಾಲಂಕಾರ ಮಾಡುವುದು ಮತ್ತು ವಿವಿಧ ಇಲಾಖೆಗಳವರು ತಮ್ಮ ಕಟ್ಟಡಗಳ ಮೇಲೆ ದೀಪಾಲಂ ಕಾರ ಮಾಡುವುದರೊಂದಿಗೆ ಜಾತ್ರಾ ರಂಗನ್ನು ಹೆಚ್ಚಿಸಬೇಕೆಂದು ಕೋರಿದರು.
ದೇವಸ್ಥಾನದ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸುವುದರೊಂದಿಗೆ ಸ್ವಚ್ಚತೆ,ಭದ್ರತಾ ಸಿಬ್ಬಂದಿ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು.
ಶಕ್ತಿ ಯೋಜನೆ ಹಿನ್ನೆಲೆ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣ ಕೆ.ಎಸ್.ಆರ್.ಟಿ.ಸಿ ವತಿಯಿಂದ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿ, ಅಕ್ಕಪಕ್ಕದ ಡಿಪೋಗಳಿಂದ ಬಸ್ ತರಿಸಿ ಎಂದು ಡಿಸಿ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಕೃಷ್ಣಂ ರಾಜು, ಅಡಿಷನಲ್ ಎಸ್ಪಿ ಬಾಬು, ಏಳು ಹಳ್ಳಿಗಳ ಯಜಮಾನರು,ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.