Fri. Mar 6th, 2026

ಲಾಲ್ ಬಾಗ್,ಕಬ್ಬನ್ ಪಾರ್ಕ್ ರೀತಿ ಬೆಂಗಳೂರಿನಲ್ಲಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ನಿರ್ಮಾಣ

Share this with Friends

ಬೆಂಗಳೂರು: ಉದ್ಯಾನನಗರಿ ಎನ್ನುವ ಹೆಗ್ಗಳಿಕೆಗೆ ಪ್ರಮುಖ ಕಾರಣವಾಗಿರುವ ಲಾಲ್ ಬಾಗ್,ಕಬ್ಬನ್ ಪಾರ್ಕ್ ರೀತಿಯ ಬೃಹತ್ ಜೀವವೈವಿಧ್ಯ ಉದ್ಯಾನ 153 ಎಕರೆಯಲ್ಲಿ ವಿಶ್ವಗುರು ಬಸವಣ್ಣ ಅವರ ಹೆಸರಿನಲ್ಲಿ ನಿರ್ಮಾಣವಾಗಲಿದೆ.

ಹೌದು,1760ರಲ್ಲಿ ನಿರ್ಮಾಣವಾದ ಲಾಲ್‌ಬಾಗ್ ಮತ್ತು 1870ರ ಕಬ್ಬನ್ ಪಾರ್ಕ್ ನಂತರ, ಬಹುತೇಕ ಒಂದೂವರೆ ಶತಮಾನಗಳ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ಆ ಮೂಲಕ ಬೆಂಗಳೂರು ನಗರಕ್ಕೆ ಮತ್ತೊಂದು ಐತಿಹಾಸಿಕ ಕೊಡುಗೆ ನೀಡುತ್ತಿದೆ.

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಸಮೀಪದ ಮಾದಪ್ಪನಹಳ್ಳಿಯಲ್ಲಿ ಅಭಿವೃದ್ಧಿಯಾಗಲಿರುವ ಈ ಉದ್ಯಾನವು ರಾಜ್ಯ ರಾಜಧಾನಿಯ ಮೂರನೇ ಅತಿದೊಡ್ಡ ಉದ್ಯಾನವಾಗಲಿದೆ. ಅರಣ್ಯ ಇಲಾಖೆಯಿಂದ 153 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ಯೋಜನೆಗೆ ಸಚಿವ ಸಂಪುಟದ ಅನುಮೋದನೆಯೂ ಲಭಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತರ, ಬಹುತೇಕ ಒಂದೂವರೆ ಶತಮಾನಗಳ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತಸದ ವಿಚಾರ.ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣ ಹಾಗೂ ಮನೋಲ್ಲಾಸ ಕೇಂದ್ರವಾಗಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲು ₹50 ಕೋಟಿ ಅನುದಾನ ಮಂಜೂರಾಗಿದೆ. ಈ ಮಹತ್ವದ ನಿರ್ಧಾರಕ್ಕೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ಸಂಪುಟ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದರು.


Share this with Friends

Related Post