ಮೈಸೂರು.ಏ.9: ಮತದಾರರು ಜಾತಿ, ಮತ, ಧರ್ಮ ನೋಡದೆ ಸೂಕ್ತ ವ್ಯಕ್ತಿಗೆ ಮತ ಹಾಕಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಡಾ ಕೆ.ವಿ.ರಾಜೇಂದ್ರ ಕರೆ ನೀಡಿದರು.
ಜಿಲ್ಲಾಡಳಿತ- ಜಿಲ್ಲಾ ಸ್ವೀಪ್ ಸಮಿತಿ ಕಲಾಮಂದಿರದಲ್ಲಿ ಆಯೋಜಿಸಿದ್ದ ಚುನಾವಣಾ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು,ವಿದ್ಯಾವಂತರು ಮತದಾನದ ಪ್ರಾಮುಖ್ಯತೆಯನ್ನು ತಿಳಿದುಕೊಂಡು ತಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಜನರಿಗೂ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ನೈತಿಕ ಮತದಾನ ಮಾಡುವಂತೆ ಆಗಬೇಕು ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ತಿಳಿಸಿದರು.
ಚುನಾವಣೆ ಹತ್ತಿರವಾಗುತ್ತಿದ್ದು, ಪ್ರತಿಯೊಬ್ಬರೂ ವೋಟರ್ ಹೆಲ್ಪ್ ಲೈನ್ ಆಪ್ ಮೂಲಕ ತಮ್ಮ ಹೆಸರು ಹಾಗೂ ತಮ್ಮ ಕುಟುಂಬದವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ತಮ್ಮ ಮತಗಟ್ಟೆ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತದಾನ ಪ್ರತಿಯೊಬ್ಬರ ಹಕ್ಕು, ಮೊದಲು ಮತದಾನಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು, ಕ್ಯೂ ಮ್ಯಾನೇಜ್ ಮೆಂಟ್ ಆಪ್ ಹೋರತರಲಾಗಿದ್ದು, ಇದರಿಂದ ಮತದಾರರು ತಮ್ಮ ಮತಟ್ಟೆಯಲ್ಲಿ ಎಷ್ಟು ಕ್ಯೂ ಇದೆ ಎಂಬುದನ್ನು ತಿಳಿದುಕೊಂಡು ಮತದಾನ ಮಾಡಬಹುದು ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ರಮೇಶ್ ಬನೋತ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್, ಸಿಎಫ್ ಟಿ ಆರ್ ಐ ನಿರ್ದೇಶಕರಾದ ಶ್ರೀದೇವಿ ಅನ್ನಪೂರ್ಣ ಸಿಂಗ್, ಆಯಿಷ್ ಸಂಸ್ಥೆ ನಿರ್ದೇಶಕರಾದ ಡಾ.ಪುಷ್ಪಾವತಿ, ಜಿಪಂ ಸಿಇಒ ಕೆ.ಎಂ.ಗಾಯಿತ್ರಿ,ಎಸ್ಪಿ ಸೀಮಾ ಲಾಟ್ಕರ್, ಕ್ಷೇತ್ರ ಪ್ರಚಾರಾಧಿಕಾರಿ ಶೃತಿ, ಮಹಾನಗರ ಪಾಲಿಕೆ ಆಯುಕ್ತ ಎನ್ ಎನ್ ಮಧು, ಮೈಸೂರು ಆಕಾಶವಾಣಿ ನಿಲಯದ ನಿರ್ದೇಶಕ ಉಮೇಶ್, ಚುನಾವಣಾ ಐಕಾನ್ ಗಳಾದ ಕೃಪಾಕರ ಮತ್ತು ಸೇನಾನಿ, ಮಹೇಂದ್ರ, ತನಿಷ್ಕಾ ಮೂರ್ತಿ, ಶ್ರೀನಿವಾಸ್, ಆನಂದ್ ರಾಜ್ ರೂನ್ ವಾಲ, ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.