ಬೆಂಗಳೂರು: ಎಲ್.ಕೆ.ಆಡ್ವಾಣಿ ಅವರ ‘ನನ್ನ ದೇಶ ನನ್ನ ಜೀವನ’ ಎಂಬ ಪುಸ್ತಕದಲ್ಲಿನ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಮತಗಳ್ಳತನ ಆರಂಭ ಎನ್ನುವ ಅಂಶಗಳೊಂದಿಗೆ ವೋಟ್ ಚೋರಿ ಆರೋಪ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡೆಸಿದ ಜಂಟಿ ಸುದ್ದಿಗೋಷ್ಠಿಗೆ ಮಾಜಿ ಸಚಿವ ಮತ್ತು ಶಾಸಕ ಎಸ್.ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ
ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಇವತ್ತು ನಮ್ಮ ಪಕ್ಷದ ಶ್ರೇಷ್ಠ ನಾಯಕ ಎಲ್.ಕೆ.ಆಡ್ವಾಣಿ ಅವರ ಜನ್ಮದಿನ. ಅವರ, ‘ನನ್ನ ದೇಶ ನನ್ನ ಜೀವನ’ ಎಂಬ ಪುಸ್ತಕವಿದೆ. ಸ್ವಾತಂತ್ರ್ಯಾನಂತರದ ಭಾರತೀಯ ರಾಜಕೀಯ ತಿಳಿದುಕೊಳ್ಳಲು ಆ ಪುಸ್ತಕ ಓದಬೇಕು. 1951ರ ಡಿಸೆಂಬರ್‍ನಿಂದ ಪ್ರಾರಂಭವಾದ 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಮತಗಳ್ಳತನ ಆರಂಭವಾಗಿತ್ತು ಎಂದು ಅವರು ಬರೆದಿದ್ದಾರೆ ಎಂದು ತಿಳಿಸಿದರು.
ಚಿಹ್ನೆ ಇರದ ಚುನಾವಣೆಯ ರೋಚಕ ಪ್ರಸಂಗ:
ಮೊದಲನೇ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಚಿಹ್ನೆ ಇರಲಿಲ್ಲ. ಪ್ರತಿಯೊಂದು ಮತಗಟ್ಟೆಯಲ್ಲಿ ಬೇರೆ ಬೇರೆ ಪೆಟ್ಟಿಗೆಗಳನ್ನು ಇಟ್ಟು ಪ್ರತಿ ಪೆಟ್ಟಿಗೆಗೆ ಕಾಂಗ್ರೆಸ್, ಜನಸಂಘ, ಸ್ವತಂತ್ರ ಪಕ್ಷ ಮೊದಲಾದ ಹೆಸರು ಹಾಕಲಾಗುತ್ತಿತ್ತು. ಆಗ ಸಾಕ್ಷರತೆ ಪ್ರಮಾಣ ಕಡಿಮೆ ಇತ್ತು. ಮತದಾರರಿಗೆ ಒಂದು ಚೀಟಿ ಕೊಡುತ್ತಿದ್ದರು. ಅವರು ತಮ್ಮ ಆಯ್ಕೆಯ ಪಕ್ಷದ ಪೆಟ್ಟಿಗೆಯಲ್ಲಿ ಹಾಕಬೇಕಿತ್ತು. ಆಗ ಕಾಂಗ್ರೆಸ್ ಪ್ರಬಲ ಪಕ್ಷವಾಗಿತ್ತು. ಚೀಟಿಯನ್ನು ಪೆಟ್ಟಿಗೆಗೆ ಹಾಕದೇ ಹೊರಗೆ ತಂದರೆ ಒಂದು ರೂ. ಕೊಡುವುದಾಗಿ ಕಾಂಗ್ರೆಸ್ಸಿಗರು ಮತದಾರರಿಗೆ ಆಮಿಷ ಒಡ್ಡುತ್ತಿದ್ದರು. ಆಗ ಆ ಒಂದು ರೂಪಾಯಿಗೆ ದೊಡ್ಡ ಮೌಲ್ಯವಿತ್ತು. ಹತ್ತಾರು ಸೇರು ಅಕ್ಕಿ ಬರುತ್ತಿತ್ತೆಂದು ಕೇಳಲ್ಪಟ್ಟಿದ್ದೇನೆ .25 ಚೀಟಿಗಳಾದ ಬಳಿಕ ತಮಗೆ ಬೇಕಾದ ಪೆಟ್ಟಿಗೆಯಲ್ಲಿ ಅದನ್ನು ಹಾಕಿ ಬರುತ್ತಿದ್ದರು. ಇದು ಎಲ್.ಕೆ.ಆಡ್ವಾಣಿ ಅವರು ಉಲ್ಲೇಖಿಸಿದ ರೋಚಕ ಪ್ರಸಂಗ ಎಂದು ವಿವರಿಸಿದರು. ಆ ಕಾಲದಲ್ಲೇ ಮತಗಳ್ಳತನ ಆರಂಭವಾಗಿತ್ತು ಎಂದು ತಿಳಿಸಿದರು.
1999ರಲ್ಲಿ ಬಹಳ ದೊಡ್ಡ ವೋಟ್ ಚೋರಿ:
1999ರಲ್ಲಿ ಬಹಳ ದೊಡ್ಡ ವೋಟ್ ಚೋರಿ ನಡೆದಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆಗ ಗಿರಿಧರ್ ಗೊಮ್ಯಾಂಗೊ ಎಂಬ ಒರಿಸ್ಸಾ ಮುಖ್ಯಮಂತ್ರಿ ಇದ್ದರು. ಅವರು ಸಂಸತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ; ಆ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಗಿರಿಧರ್ ಗೊಮ್ಯಾಂಗೊರನ್ನು ಕರೆಸಿ ಮತ ಪಡೆದ ಖ್ಯಾತಿ ಕಾಂಗ್ರೆಸ್ ಪಕ್ಷದ್ದು. ವಾಜಪೇಯಿ ಅವರು ಸೋತದ್ದು ಕೇವಲ ಒಂದು ಮತದಿಂದ ಎಂದು ವಿವರ ನೀಡಿದರು.
ಕಾಂಗ್ರೆಸ್ಸಿನ ಹಿಂದಿನ ರಾಜ್ಯಾಧ್ಯಕ್ಷ ಮತ್ತು ಇವತ್ತಿನ ಗೃಹ ಸಚಿವ ಡಾ.ಪರಮೇಶ್ವರ್ ಅವರ ಹೇಳಿಕೆ ಮತಗಳ್ಳತನದ ಮಾಹಿತಿ ನೀಡಿದೆ. ವೇದಿಕೆಯಲ್ಲಿ ಭಾಷಣ ಮಾಡಿದ್ದ ಅವರು, ‘ನಿಮಗೆ ಗೊತ್ತಿಲ್ಲವೇ; ಇವಿಎಂ ಬರುವ ಮೊದಲು ನಾವೇನು ಮಾಡುತ್ತಿದ್ದೆವೆಂದು? ರೂಮಲ್ಲೇ ಕೂತು ಗುದ್ದಿ ಗುದ್ದಿ ಮತ ಪಡೆಯುತ್ತಿದ್ದೆವು’ ಎಂದು ಈ ರಾಜ್ಯದ ಗೃಹ ಸಚಿವರು ಹೇಳಿದ್ದಾರೆ. ಹಾಗಿದ್ದರೆ ಮತಗಳ್ಳತನ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಹಿಂದೆ ನಮ್ಮ ಪಕ್ಷದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಶೇ 40 ಕಮಿಷನ್ ಸರಕಾರ ಎಂದು ಹೇಳುತ್ತ ಬಂದಿದ್ದರು. ಈ ಸರಕಾರ ಬಂದ ಬಳಿಕ ನಾಗಮೋಹನ್ ದಾಸ್ ಆಯೋಗವನ್ನೂ ರಚಿಸಿದರು. ಈಗ ನನಗೆ ಗೊತ್ತಿರುವಂತೆ ಆ ಆಯೋಗ ಮುಂದುವರೆಯುತ್ತಿಲ್ಲ; ಪೇ ಸಿಎಂ ಎಂದು ಪೋಸ್ಟರ್ ಅಂಟಿಸಿದರು. ಅದರ ಮುಂದುವರಿದ ಭಾಗವೇ ಮತಗಳ್ಳತನದ ಅಪಪ್ರಚಾರ ಎಂದು ವಿವರಿಸಿದರು.

