Tue. Mar 17th, 2026

ಮತದಾರರ ಪಟ್ಟಿ ಪರಿಶೀಲನಾ ವೆಬ್‌ಸೈಟ್ ದೋಷ: ಸರಿಪಡಿಸಲು ಜಿಬಿಎಗೆ ಬಿಜೆಪಿ ಮನವಿ

Share this with Friends

ಬೆಂಗಳೂರು: ಮತದಾರರ ಹೆಸರು ಪರಿಶೀಲಿಸುವ ಜಿಬಿಎ (GBA) ವೆಬ್‌ಸೈಟ್‌ನಲ್ಲಿನ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಬೇಕು ಮತ್ತು ಹಕ್ಕು ಹಾಗೂ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಈ ಕುರಿತು ಬಿಜೆಪಿ ಬೆಂಗಳೂರು ಮಹಾನಗರದ ಘಟಕದ ವತಿಯಿಂದ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು. ಕಳೆದ ಒಂದು ವಾರದಿಂದ ಜಿಬಿಎ ವೆಬ್‌ಸೈಟ್‌ನ ಯುಆರ್‍ಎಲ್ (URL) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ನಾಗರಿಕರು ತಮ್ಮ ವಿವರಗಳನ್ನು ಅಥವಾ ಎಪಿಕ್ ಕಾರ್ಡ್ ಸಂಖ್ಯೆಯನ್ನು ಬಳಸಿ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷವು ದೂರಿದೆ.

“ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದ್ದರೂ, ಪೋರ್ಟಲ್‌ನಲ್ಲಿ ಹೆಸರು ಹುಡುಕಲು ಸಾಧ್ಯವಾಗದಿದ್ದರೆ ನಾಗರಿಕರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಪ್ರಕ್ರಿಯೆ ಪೂರ್ಣಗೊಳಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಯುಆರ್‍ಎಲ್ ಸರಿಪಡಿಸಿದ ನಂತರವೇ ಆಕ್ಷೇಪಣೆ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕು,” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಮನವಿಗೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್ ಮತ್ತು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ ಅವರು ಸಹಿ ಹಾಕಿದ್ದಾರೆ.

 


Share this with Friends

Related Post