Fri. Nov 1st, 2024

ಮತದಾನ ಜಾಗೃತಿ: ಅರ್ಥಪೂರ್ಣ ಮಹಿಳಾ ದಿನಾಚರಣೆ-ವಾಕಥಾನ್

Share this with Friends

ಬೆಂಗಳೂರು, ಮಾ.17: ಲೋಕಸಭಾ ಚುನಾವಣೆಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಮಹಿಳಾ ದಿನಾಚರಣೆ, ವಿಶೇಷ ವಾಕಾಥಾನ್‌ ಹಮ್ಮಿಕೊಳ್ಳಲಾಯಿತು.

ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಬಿಬಿಎಂಪಿ ಮತ್ತು ನಗರದ ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ವಿಶೇಷ ವಾಕಾಥಾನ್‌ನಲ್ಲಿ ಸಾವಿರಾರು ಹೆಣ್ಣುಮಕ್ಕಳು, ನಾಗರಿಕರು ಅತ್ಯುತ್ಸಾಹದಿಂದ ಭಾಗವಹಿಸಿದ್ದರು.

ಮಾರತಹಳ್ಳಿಯಲ್ಲಿರುವ ಕಾವೇರಿ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಬೆಳಗ್ಗೆ 6:30ಕ್ಕೆ ಖ್ಯಾತ ನಟಿ ಪ್ರಣಿತ ಸುಭಾಷ್ ವಾಕಾಥಾನ್, ಬೈಕ್ ರ‌್ಯಾಲಿ ಮತ್ತು ಬೈಸಿಕಲ್ ರ‌್ಯಾಲಿಗೆ ಚಾಲನೆ ನೀಡಿದರು.

ಸುಮಾರು 500 ಬೈಕುಗಳು 1200 ಸೈಕಲ್ ಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು. ಮಾರತಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ವಾಕಾಥಾನ್ ವೇಳೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ನಟಿ ಪ್ರಣಿತ ಸುಭಾಷ್, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಪ್ರಜಾಪ್ರಭುತ್ವದ ಅತಿ ದೊಡ್ಡ ಉತ್ಸವವಾಗಿರುವ ಲೋಕಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವ ಮೂಲಕ ಭಾಗವಹಿಸಬೇಕು ಎಂದು ಕರೆ ನೀಡಿದರು.

ದೇಶದ ಐಟಿ ರಾಜಧಾನಿ ಆಗಿರುವ ಬೆಂಗಳೂರಿನಲ್ಲಿ ನಾಗರಿಕರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು, ತಮ್ಮ ಪರಿಚಿತರಿಗೆ, ಸ್ನೇಹಿತರಿಗೆ ಮತದಾನ ಮಾಡುವಂತೆ ತಿಳಿಸಬೇಕು ಎಂದು ಬಿಬಿಎಂಪಿ ಚುನಾವಣೆಗಳ ವಿಶೇಷ ಆಯುಕ್ತರಾದ ಡಾ. ಆರ್. ಸೇಲ್ವಮಣಿ ಹೇಳಿದರು.

ಚುನಾವಣಾ ಆಯೋಗದ ಮಾಧ್ಯಮ ಮುಖ್ಯಸ್ಥರಾದ ಜಡಿಯಪ್ಪ ಗೆದ್ಲಗಟ್ಟಿ, ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಭಾಸ್ಕರನ್ ಮತ್ತಿತರರು ಹಾಜರಿದ್ದರು.


Share this with Friends

Related Post