ಬೆಂಗಳೂರು: ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ (Single Use Plastic) ಬಳಕೆಯ ವಿರುದ್ಧ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾರ್ಷಲ್ ತಂಡಗಳು ಕಠಿಣ ಕ್ರಮ ಕೈಗೊಂಡಿವೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘಿಸಿದ 27 ಅಂಗಡಿಗಳಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಜಂಟಿ ಕಾರ್ಯಾಚರಣೆ:
ಗಾಂಧಿನಗರ ಹಾಗೂ ಕೆ.ಆರ್. ಮಾರುಕಟ್ಟೆ ವಿಭಾಗದ ಮಾರ್ಷಲ್ ತಂಡಗಳು ಚಿಕ್ಕಪೇಟೆಯ ವಿವಿಧ ರಸ್ತೆಗಳಲ್ಲಿನ ವಾಣಿಜ್ಯ ಸಂಕೀರ್ಣ ಮತ್ತು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದವು. ಈ ವೇಳೆ ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಪ್ಲಾಸ್ಟಿಕ್ ಕವರ್‌ಗಳು, ಲೋಟಗಳು ಹಾಗೂ ಇತರ ಉತ್ಪನ್ನಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ.
ದಂಡದ ವಿವರ:
ಪರಿಶೀಲನೆ ನಡೆಸಿದ ಒಟ್ಟು ಅಂಗಡಿಗಳಲ್ಲಿ 27 ಅಂಗಡಿಗಳು ನಿಯಮ ಬಾಹಿರವಾಗಿ ಪ್ಲಾಸ್ಟಿಕ್ ಸಂಗ್ರಹಿಸಿರುವುದು ಮತ್ತು ಗ್ರಾಹಕರಿಗೆ ನೀಡುತ್ತಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾರ್ಷಲ್ ತಂಡವು ಒಟ್ಟು ₹1,19,600/- (ಒಂದು ಲಕ್ಷದ ಹತ್ತೊಂಬತ್ತು ಸಾವಿರದ ಆರುನೂರು ರೂ.) ದಂಡ ವಿಧಿಸಿ, ಸ್ಥಳದಲ್ಲೇ ವಸೂಲಿ ಮಾಡಿದೆ. ಅಲ್ಲದೆ, ವಶಪಡಿಸಿಕೊಂಡ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಿಲೇವಾರಿಗಾಗಿ ರವಾನಿಸಲಾಗಿದೆ.
ಕಟ್ಟುನಿಟ್ಟಿನ ಎಚ್ಚರಿಕೆ:
ದಾಳಿಯ ವೇಳೆ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಅಧಿಕಾರಿಗಳು, “ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿಷೇಧಿತ ಪ್ಲಾಸ್ಟಿಕ್ ಬಳಸಬಾರದು. ಒಂದು ವೇಳೆ ನಿಯಮ ಉಲ್ಲಂಘನೆ ಮುಂದುವರಿದರೆ ಅಂಗಡಿಗಳ ಪರವಾನಗಿ ರದ್ದುಪಡಿಸುವಂತೆ ಶಿಫಾರಸು ಮಾಡಲಾಗುವುದು,” ಎಂದು ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಬೆಂಗಳೂರು ನಿರ್ಮಾಣದ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ವರ್ತಕರು ಸಹಕರಿಸಬೇಕು ಎಂದು ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

