ಬೆಂಗಳೂರು: ಬಡವರ ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,ಮಾರ್ಚ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ಸಮರ್ಪಕವಾಗಿರಲಿದೆ, ತಾತ್ಕಾಲಿಕಾಗಿ ಜನೌಷಧ ಕೇಂದ್ರಗಳ ಔಷಧ ಬಳಕೆಗೂ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯ ಬಗ್ಗೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ವಿಕಾಸಸೌಧದಲ್ಲಿ ಇಲಾಖೆಯ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಔಷಧ ಪೂರೈಕೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆಯ ಪ್ರಮುಖಾಂಶಗಳು:
1. ₹50 ಕೋಟಿ ಮಧ್ಯಂತರ ನಿಧಿ ಬಿಡುಗಡೆ:
ಔಷಧಗಳ ತುರ್ತು ಖರೀದಿಗಾಗಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ (KSMSCL) ₹50 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನೀಡಲಾಗಿದೆ. ಈ ನಿಧಿಯನ್ನು ಬಳಸಿಕೊಂಡು ಪ್ರಸ್ತುತ ಕೊರತೆಯಿರುವ ಅತ್ಯಗತ್ಯ ಔಷಧಿಗಳನ್ನು ತಕ್ಷಣವೇ ಪೂರೈಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
2. 496 ಔಷಧಿಗಳ ಆದ್ಯತೆಯ ಖರೀದಿ:
ಒಟ್ಟು 496 ಬಗೆಯ ಔಷಧಗಳನ್ನು ಪಟ್ಟಿಯ ಮೊದಲ ಆದ್ಯತೆಯಾಗಿ ಖರೀದಿಸಲು ಆದೇಶಿಸಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬವನ್ನು ತಪ್ಪಿಸಲು ಹಾಗೂ ಸರಬರಾಜುದಾರರೊಂದಿಗೆ ಸಮನ್ವಯ ಸಾಧಿಸಲು ವಿಶೇಷ ಅಧಿಕಾರಿಗಳ ತಂಡವನ್ನು ನೇಮಿಸಲಾಗಿದ್ದು, ಖರೀದಿ ಉಸ್ತುವಾರಿ ನೋಡಿಕೊಳ್ಳಲು ಸೂಚಿಸಲಾಯಿತು.
3. ಜಿಲ್ಲಾ ಮಟ್ಟದಲ್ಲಿ ನೇರ ಖರೀದಿ ಅಧಿಕಾರ:
ಯಾವುದೇ ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಗಳ ತೀವ್ರ ಕೊರತೆ ಕಂಡುಬಂದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (DHO) ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ನೇರವಾಗಿ GeM ಪೋರ್ಟಲ್ ಮೂಲಕ ಸ್ಥಳೀಯವಾಗಿ ಖರೀದಿ ಮಾಡಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಅನುದಾನವನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಯಿತು.
4. ಜನೌಷಧಿ ಕೇಂದ್ರಗಳ ಬಳಕೆ:
ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳ ಮೂಲಕ ರೋಗಿಗಳಿಗೆ ಉಚಿತವಾಗಿ ಔಷಧಗಳನ್ನು ಒದಗಿಸಲು ಆಯಾ ಆಸ್ಪತ್ರೆಗಳ ಆಡಳಿತ ಮಂಡಳಿಗೆ ಸೂಚನೆ ನೀಡಬೇಕು. ಇದರಿಂದ ಬಡ ರೋಗಿಗಳು ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಹೋಗುವುದು ತಪ್ಪಲಿದೆ ಎನ್ನುವ ನಿರ್ಧಾರ ಮಾಡಲಾಯಿತು.
5. ಬಿಲ್ ಪಾವತಿ ಸರಳೀಕರಣ:
ಔಷಧ ಪೂರೈಕೆ ಮಾಡುವ ಕಂಪನಿಗಳಿಗೆ ಪಾವತಿಸಬೇಕಾದ ಬಾಕಿ ಮೊತ್ತವನ್ನು ಕೂಡಲೇ ಚುಕ್ತಾ ಮಾಡಲು ಸಚಿವರು ಸೂಚಿಸಿದರು. ಇದರಿಂದ ಸರಬರಾಜುದಾರರು ಆಸಕ್ತಿಯಿಂದ ಔಷಧಗಳನ್ನು ಪೂರೈಸಲು ಮುಂದೆ ಬರಲಿದ್ದಾರೆ.
ಸಚಿವರ ಹೇಳಿಕೆ:
“ಬಡವರ ಆರೋಗ್ಯದ ವಿಚಾರದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. 90% ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸುಗಮವಾಗಿದ್ದರೂ, ಉಳಿದ 10% ಭಾಗಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲಾಗುವುದು. ಮಾರ್ಚ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ಸಮರ್ಪಕವಾಗಿರಲಿದೆ,” ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.
ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಮತ್ತು KSMSCL ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು

