Fri. Mar 6th, 2026

ಸಾರಿಗೆ ಬಸ್‌ಗಳಲ್ಲಿನ ಜಾಹೀರಾತು ಹಾನಿಗೊಳಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

Share this with Friends

ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುತ್ತಿರುವ ಅಧಿಕೃತ ಜಾಹೀರಾತುಗಳನ್ನು ಹಾನಿಗೊಳಿಸುವ ಅಥವಾ ಹರಿದು ಹಾಕುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಗಳು ಮತ್ತು ವ್ಯಕ್ತಿಗಳು ಬಸ್‌ಗಳ ಮೇಲಿರುವ ಜಾಹೀರಾತುಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಈ ಕೆಳಗಿನ ಪ್ರಮುಖ ಸೂಚನೆಗಳನ್ನು ಹೊರಡಿಸಿದೆ:

ಶಿಕ್ಷಾರ್ಹ ಅಪರಾಧ: ಸಾರಿಗೆ ಸಂಸ್ಥೆಯ ಬಸ್‌ಗಳು ಸಾರ್ವಜನಿಕ ಆಸ್ತಿಯಾಗಿದ್ದು, ಅವುಗಳ ಮೇಲಿನ ಜಾಹೀರಾತು ಹಾನಿಗೊಳಿಸುವುದು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ-1984 ರ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಇಂತಹ ಕೃತ್ಯ ಎಸಗುವವರನ್ನು ಗುರುತಿಸಿ ಪೋಲೀಸ್ ದೂರು ದಾಖಲಿಸಲಾಗುವುದು.

ತಂಬಾಕು ಜಾಹೀರಾತುಗಳ ತೆರವು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಆದೇಶದಂತೆ, ಬಸ್‌ಗಳ ಮೇಲಿರುವ ತಂಬಾಕು ಮತ್ತು ಪಾನ್ ಮಸಾಲಾ ಜಾಹೀರಾತುಗಳನ್ನು ಅಧಿಕೃತವಾಗಿ ತೆರವುಗೊಳಿಸಲು KSRTC ಈಗಾಗಲೇ 15 ದಿನಗಳ ಗಡುವು ನೀಡಿದೆ. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದೆ ಸಂಸ್ಥೆಗೆ ಸಹಕರಿಸಬೇಕು.

ನಷ್ಟ ವಸೂಲಾತಿ: ಜಾಹೀರಾತು ಹಾನಿಯಿಂದ ಸಂಸ್ಥೆಗೆ ಉಂಟಾಗುವ ಆರ್ಥಿಕ ನಷ್ಟವನ್ನು ಸಂಬಂಧಪಟ್ಟ ವ್ಯಕ್ತಿ ಅಥವಾ ಸಂಘಟನೆಯಿಂದಲೇ ವಸೂಲಿ ಮಾಡಲಾಗುವುದು.

ದೂರು ಸಲ್ಲಿಸಲು ಸೂಚನೆ: ಸಾರ್ವಜನಿಕರಿಗೆ ಯಾವುದೇ ಜಾಹೀರಾತುಗಳ ಬಗ್ಗೆ ಆಕ್ಷೇಪವಿದ್ದಲ್ಲಿ, ಅವರು ಅದನ್ನು ಇಲಾಖೆಯ ಗಮನಕ್ಕೆ ತರಬೇಕೇ ಹೊರತು ನೇರವಾಗಿ ಹಾನಿ ಮಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಿ ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.


Share this with Friends

Related Post