ಬೆಂಗಳೂರು:ಬಿಹಾರ ರಾಜ್ಯದ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರೀಕೂಟಕ್ಕೆ ಇಷ್ಟೊಂದು ಮುನ್ನಡೆ ಯಾಕೆ ಬಂದಿದೆಯೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ವೋಟ್ ಚೋರಿಯ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಬಿಹಾರ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ, ಜನರ ತೀರ್ಪನ್ನು ಒಪ್ಪಿಕೊಳ್ಳಬೇಕು ಆದರೆ ಯಾಕೆ ಹಿನ್ನಡೆಯಾಗಿ ಏನು ಎಂದು ಗೊತ್ತಿಲ್ಲ, ಯಾರು ಮತಹಾಕಿಲ್ಲ, ಯಾಕೆ ಎನ್.ಡಿ.ಎ ಇಷ್ಟೊಂದು ದೊಡ್ಡ ಬಹುಮತದಲ್ಲಿ ಗೆದ್ದಿದೆ ಗೊತ್ತಿಲ್ಲ, ನಮ್ಮ ರಾಜ್ಯದಲ್ಲಿಯೂ ಅವರು ವೋಟ್ ಚೋರಿ ಮಾಡಿದ್ದರಲ್ಲವೇ ಎಂದು ಬಿಹಾರದಲ್ಲಿಯೂ ವೋಟ್ ಚೋರಿ ಸಾಧ್ಯತೆಯನ್ನು ಪ್ರಸ್ತಾಪಿಸಿದರು.
ಪ್ರತಿಪಕ್ಷ ಕೂಟ ಬಹುವಾಗಿ ನಂಬಿದ್ದ ಒಬಿಸಿ ಸಮುದಾಯ ಕೈಹಿಡಿಯಲಿಲ್ಲವೇ ಎನ್ನುವ ಪ್ರಶ್ನಿಗೆ ನಿತೀಶ್ ಕುಮಾರ್ ಯಾರ್ರೀ,ಒಬಿಸೊ ಅಲ್ವಾ? ಎಂದು ಸಿಡಿಮಿಡಿಯಾಗುತ್ತಾ ಫಲಿತಾಂಶದ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದರು.
ಬಾಗಲಕೋಟೆಯಲ್ಲಿ ಕಬ್ಬಿಗೆ ಬೆಂಕಿ ಪ್ರಕರಣ : ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ
ಬಾಗಲಕೋಟೆ ಕಬ್ಬು ಬೆಳೆಗಾರರು ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿ, ರೈತರು ಅದಕ್ಕೆ ಕಾರಣರಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸರ್ಕಾರ 3300 ರೂ.ಗಳ ದರ ನಿಗದಿ ಮಾಡಿದ್ದು, ಮುಧೋಳ ಹೊರತುಪಡಿಸಿ ಎಲ್ಲ ರೈತರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ.ಮುಧೋಳ ರೈತರ ಜತೆಯೂ ಮಾತುಕತೆ ನಡೆಸುತ್ತಿದ್ದೇವೆ ಹಾಗಾಗಿ ಅವರೂ ಚಳವಳಿಯನ್ನು ವಾಪಸ್ಸು ಪಡೆಯಬೇಕು ಎಂದು ಮನವಿ ಮಾಡಿದರು.
ರೈತರ ಈ ಹೋರಾಟದ ಹಿಂದೆ ರಾಜಕೀಯ ಪ್ರಚೋದನೆ ಇದ್ದೇ ಇದೆ. ಬಿಜೆಪಿ ಅವರಿಗೆ ಬೇರೆ ಏನು ಕೆಲಸ ಇಲ್ಲ ಅವರಿಗೆ ಪ್ರಚೋದನೆ ಮಾಡುವುದೇ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

