ಬೆಂಗಳೂರು: ರಾಜಧಾನಿಯಲ್ಲಿ ಮುಂಬರುವ ಬೇಸಿಗೆಯ ಅವಧಿಯಲ್ಲಿ ಎದುರಾಗಬಹುದಾದ ನೀರಿನ ಬೇಡಿಕೆ ಹಾಗೂ ಅಭಾವವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಮರೋಪಾದಿಯ ಸಿದ್ಧತೆ ಕೈಗೊಂಡಿದೆ. ನಗರದ ಯಾವುದೇ ಭಾಗದಲ್ಲಿ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಬೇಸಿಗೆಯ ಸಿದ್ಧತೆಗಳ ಕುರಿತು ಸುದೀರ್ಘ ಪರಿಶೀಲನೆ ನಡೆಸಿದರು. “ನಗರದ ಜನತೆಗೆ ನೀರು ಒದಗಿಸುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಮಂಡಳಿಯು ಈಗಾಗಲೇ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಮಿನಿ ವಾಟರ್ ಟ್ಯಾಂಕ್’ ಕ್ರಾಂತಿ:
ನೀರಿನ ಅಭಾವವಿರುವ ಹಾಗೂ ಜನಸಾಂದ್ರತೆ ಹೆಚ್ಚಿರುವ ಸ್ಲಂ ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಂತಹ ಕಡೆಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ‘ಮಿನಿ ವಾಟರ್ ಟ್ಯಾಂಕ್’ (ಸಿಂಟೆಕ್ಸ್ ಟ್ಯಾಂಕ್) ಗಳನ್ನು ಅಳವಡಿಸಿ, ಅವುಗಳ ಮೂಲಕ ಉಚಿತವಾಗಿ ಕುಡಿಯುವ ನೀರು ಒದಗಿಸಲು ಮಂಡಳಿ ನಿರ್ಧರಿಸಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದೊಡ್ಡ ಮಟ್ಟದ ನೆರವಾಗಲಿದೆ ಎಂದರು.
ಖಾಸಗಿ ಟ್ಯಾಂಕರ್‌ಗಳ ಮೇಲೆ ನಿಗಾ:
ಮಿನಿ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಮೊದಲು ಜಲಮಂಡಳಿಯ ಸ್ವಂತ ಟ್ಯಾಂಕರ್‌ಗಳು ಹಾಗೂ ‘ಸಂಚಾರಿ ಕಾವೇರಿ’ ಟ್ಯಾಂಕರ್‌ಗಳನ್ನೇ ಬಳಸಿಕೊಳ್ಳಬೇಕು. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ ಮಾತ್ರ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಬೇಕು ಎಂದು ಅಧ್ಯಕ್ಷರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಅಧಿಕಾರಿಗಳಿಗೆ ‘ಫೀಲ್ಡ್’ ವರ್ಕ್ ಕಡ್ಡಾಯ:
ಬೇಸಿಗೆ ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅಧ್ಯಕ್ಷರು, “ಮುಖ್ಯ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ನೀರು ಪರಿವೀಕ್ಷಕರು ಕಚೇರಿಯಲ್ಲಿ ಕುಳಿತುಕೊಳ್ಳುವಂತಿಲ್ಲ. ಪ್ರತಿದಿನ ತಮ್ಮ ವ್ಯಾಪ್ತಿಯ ಕ್ಷೇತ್ರಗಳಿಗೆ ಭೇಟಿ ನೀಡಿ, ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಖಡಕ್ ಸೂಚನೆ ನೀಡಿದರು.
ಸಾರ್ವಜನಿಕರು ನೀರಿನ ಸೋರಿಕೆ ಅಥವಾ ಪೂರೈಕೆಯ ಸಮಸ್ಯೆಯಿದ್ದಲ್ಲಿ BWSSB ಅಧಿಕೃತ ಜಾಲತಾಣದ ಮೂಲಕ ದೂರು ದಾಖಲಿಸಬಹುದು ಎಂದು ತಿಳಿಸಿದರು.

