ಬೆಂಗಳೂರು: ನಾನು ಹಾಗು ಡಿಕೆ ಶಿವಕುಮಾರ್ ಯಾವಾಗಲೂ ಬ್ರದರ್ಸ್,ನಾವು ಒಂದೇ ಪಕ್ಷದಲ್ಲಿ ಇದ್ದೇವೆ ಒಂದೇ ಸಿದ್ದಾಂತ ನಂಬಿಕೊಂಡಿದ್ದೇವೆ. ಒಟ್ಟಿಗೆ ಕೆಲಸ ಮಾಡುತ್ತೇವೆ 2028ಕ್ಕೂ ಒಟ್ಟಿಗೆ ಕೆಲಸ ಮಾಡುತ್ತೇವೆ,ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಮಾತನಾಡಿದ ಅವರು,ಡಿಕೆ ಶಿವಕುಮಾರ್ ಆಹ್ವಾನದ ಮೇಲೆ ತಿಂಡಿಗೆ ಬಂದಿದ್ದೆ,ಉಪಹಾರ ಸೇವನೆ ಮಾಡಿದ್ದೇನೆ ಹಾಗೆಯೇ ಪಕ್ಷದ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ನಾಯಕತ್ವ, ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಅವರು ಏನು ಹೇಳುತ್ತಾರೋ ಅದಕ್ಕೆ ನಾವು ಬದ್ಧ. ರಾಹುಲ್ ಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರಂತೆ ನಡೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ.ನಡೆದುಕೊಳ್ಳುತ್ತೇವೆ,ನಾವು ಈಗ ಒಗ್ಗಟ್ಟಾಗಿರುವುದಲ್ಲ ಮೊದಲಿನಿಂದಲೂ ಒಗ್ಗಟ್ಟಾಗಿಯೇ ಇದ್ದೇವೆ, ಈಗ ನಾವು ನ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದೇವೆ, ಶಾಸಕಾಂಗ ಸಭೆ ಕರೆದಾಗ ಎಲ್ಲರೂ ಒಟ್ಟಿಗೆ ಊಟ ಮಾಡುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಬಹಳ ಮುಖ್ಯವಾಗಿ ಡಿ.8 ರಂದು ಚಳಿಗಾಲದ ಅಧಿವೇಶನ ಶುರುವಾಗಲಿದೆ. ಎರಡು ವಾರ ಅಧಿವೇಶನ ನಡೆಯಲಿದೆ ಅಲ್ಲಿ ನಮ್ಮ ತಂತ್ರಗಾರಿಕೆ ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಜೆಪಿಯವರು ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳ ವರದಿ ನೋಡಿದ್ದೇನೆ ಹಾಗೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇವೆ ಎಂದಿದ್ದಾರೆ ಅವೆಲ್ಲವುಗಳನ್ನು ಸಮರ್ಥವಾಗಿ ಎದುರಿಸುವ ಕೆಲಸವನ್ನು ಮಾಡುತ್ತೇವೆ ಬಿಜೆಪಿ ಜೆಡಿಎಸ್ ಒಟ್ಟಾಗಿ ಯಾವುದೇ ವಿಚಾರ ಪ್ರಸ್ತಾಪ ಮಾಡಿದರೂ ನಾವು ಸಮರ್ಥವಾಗಿ ಎದುರಿಸುತ್ತೇವೆ ಅವರು ಒಟ್ಟಾಗಿ ಹೋರಾಟ ಮಾಡುವ ಹೇಳಿಕೆ ನೀಡಿದ್ದಾರೆ ನಾವು ಕೂಡ ಅದಕ್ಕೆ ಸಿದ್ಧರಿದ್ದೇವೆ ಎಂದರು.
ನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಕಬ್ಬು ಮೆಕ್ಕೆಜೋಳ ವಿಚಾರದಲ್ಲಿ ನಮ್ಮ ಸರ್ಕಾರ ಯಾವಾಗಲೂ ರೈತರ ಪರವಾಗಿರಲಿದೆ ಕಬ್ಬು ಬೆಳೆಗಾರರ ಜೊತೆ ಮಾತನಾಡಿದ್ದೇನೆ ಕಬ್ಬು ಕಾರ್ಖಾನೆಗಳ ಜೊತೆ ಮಾತನಾಡಿದ್ದೇನೆ ರೈತ ಮುಖಂಡರ ಜೊತೆ ಮಾತನಾಡಿದ್ದೇನೆ ಅಂತಿಮ ರೂಪ ಕೊಡುವ ಕೆಲಸವನ್ನ ಮಾಡಿದ್ದೇನೆ ಪ್ರತಿ ಟನ್ ಕಬ್ಬಿಗೆ 50ರೂ ಸರ್ಕಾರದಿಂದ ನೀಡುವ ತೀರ್ಮಾನ ಮಾಡಿದ್ದೇವೆ ಎಂದರು.
ಹಾಲಿ ಶಾಸಕ ನಿಧನರಾಗಿರುವ ಕಾರಣ ಮೊದಲ ದಿನ ಕಲಾಪ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಹಾಗಾಗಿ ಅಂದೇ ಕಬ್ಬು,ಮೆಕ್ಕೆಜೋಳ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ತರಲು ರಾಜ್ಯದ ಎಲ್ಲ ಸಂಸದರ ಸಭೆ ನಡೆಸಬೇಕು ಎನ್ನುವ ಚಿಂತನೆ ಇದೆ ಅದೇ ವೇಳೆ ಸಮಯ ಸಿಕ್ಕರೆ ಅನುಮತಿ ನೀಡಿದರೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತೇವೆ ಎಂದರು.
ಮಂಗಳೂರಿನಲ್ಲಿ ನಾಳೆ ಕಾರ್ಯಕ್ರಮ ಇದೆ ಆ ಕಾರ್ಯಕ್ರಮದಲ್ಲಿ ನಾನು ವೇಣುಗೋಪಾಲ್ ಇಬ್ಬರು ಅತಿಥಿಗಳಾಗಿ ಹೋಗುತ್ತೇವೆ ಅಲ್ಲಿ ನಾವಿಬ್ಬರೂ ಭೇಟಿಯಾಗುತ್ತೇವೆ ಎಂದರು.
ಇವರ ಮನೇಲಿ ನಾನ್ ವೆಜ್ಜು ನಮ್ಮನೇಲಿ ವೆಜ್ಜು, ಇಲ್ಲಿ ವರ್ಜಿನಲ್ ಸಿಗಲ್ಲ ಹಾಗಾಗಿ ನಾಟಿ ಕೋಳಿ ಹಳ್ಳಿಯಿಂದ ತರಿಸಿ ಎಂದಿದ್ದೆ ಎಂದು ಸಿಎಂ ಹಾಸ್ಯ ಚಟಾಕಿ ಹಾರಿಸಿದರು.
ಎಲ್ಲಾ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ ಆದರೆ ಶೇಕಡ 15ರಷ್ಟು ಮಾತ್ರ ಸಚಿವರನ್ನಾಗಿ ಮಾಡಬಹುದು ಎಂದ ಸಿಎಂ, ಡಿಕೆ ಶಿವಕುಮಾರ್ ಯಾವಾಗ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಪ್ರಶ್ನೆಗೆ ಹೈಕಮಾಂಡ್ ಹೇಳಿದಾಗ ಎಂದರು.

