Fri. Mar 6th, 2026

ಗಾಂಧೀಜಿ ಭೇಟಿ ನೀಡಿದ್ದ ಬದನವಾಳು ಗ್ರಾಮ ಪ್ರವಾಸಿತಾಣವಾಗಿ ಅಭಿವೃದ್ಧಿ; ಪ್ರಿಯಾಂಕ್‌ ಖರ್ಗೆ

Share this with Friends

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ಬದನವಾಳು ಗ್ರಾಮದಲ್ಲಿ ಖಾದಿ ನೇಕಾಣಿಕೆಯ ಇತಿಹಾಸ, ಖಾದಿ ಉತ್ಪಾದನ ಘಟಕ, ತರಬೇತಿ ಕೇಂದ್ರ, ವಿನ್ಯಾಸಕೇಂದ್ರ, ಖಾದಿ ಪರೀಕ್ಷೆ, ದಾಸ್ತಾನು ಕೇಂದ್ರ, ಖಾದಿ ಸಂಶೋಧನ ಕೇಂದ್ರ ಮುಂತಾದ ಸೌಲಭ್ಯಗಳನ್ನು ಒಳಗೊಳ್ಳುವಂತೆ ಐತಿಹಾಸಿಕ ಹೆಜ್ಜೆಗುರುತುಗಳನ್ನು ಪುನಃರುಜ್ಜೀವನಗೊಳಿಸುವ ಮತ್ತು ಖಾದಿ ಮಹತ್ವವನ್ನು ಸಾರುವ ಆಕರ್ಷಕ ಪ್ರವಾಸಿ ತಾಣ ಏಳು ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿದೆ.

ಈ ಕುರಿತು ರೂಪುರೇಷೆ ಸಿದ್ದಪಡಿಸಲು ನಂಜನಗೂಡು ಶಾಸಕರಾದ ದರ್ಶನ್ ದೃವನಾರಾಯಣ್ ಹಾಗೂ  ಪ್ರವಾಸೋದ್ಯಮ ಇಲಾಖೆ ಹಾಗೂ ಖಾದಿ ಮಂಡಳಿಯ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ ನಡೆಸಿದರು.

ಮಹಾತ್ಮ ಗಾಂಧಿಯವರು 1927 ಹಾಗೂ 1932ರಲ್ಲಿ ಮೈಸೂರು ಜಿಲ್ಲೆಯಲ್ಲಿರುವ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಖಾದಿ ಕ್ರಾಂತಿಗೆ ಉತ್ತೇಜನ ನೀಡಿ, “ಗ್ರಾಮ ಸ್ವರಾಜ್ಯʼʼ  ಪರಿಕಲ್ಪನೆಗೆ ಕಾರಣವಾದ ಹಿನ್ನೆಲೆಯಲ್ಲಿ ಬದನವಾಳು ಗ್ರಾಮದ ಎಲ್ಲಾ ಐತಿಹಾಸಿಕ ಹೆಜ್ಜೆಗುರುತುಗಳನ್ನು ಪುನಃರುಜ್ಜೀವನಗೊಳಿಸಿ ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇಲ್ಲಿ  ಮೈಸೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ  ಬಗ್ಗೆ ವಿವರ, ವಸ್ತು ಸಂಗ್ರಹಾಲಯ ಮುಂತಾದ ಪ್ರವಾಸಿ ಆಕರ್ಷಣೆಗಳೂ ಇರಲಿದೆ ಎಂದರು.

ಮಹಾತ್ಮ ಗಾಂಧಿಯವರ ಖಾದಿ ಸ್ವತಂತ್ರ ಹೋರಾಟದ ಭಾಗವಾಗಿದ್ದ ಚಳವಳಿಯು ಹಲವು ಆಯಾಮದಲ್ಲಿ ಪರಿಣಾಮ ಬೀರುವ ದೃಷ್ಟಿಕೋನವನ್ನು ಹೊಂದಿದ್ದು, ಖಾದಿ ಗೃಹ ಕೈಗಾರಿಕೆಗೆ ಮಹಾತ್ಮ ಗಾಂಧೀಜಿ ಮಹತ್ವ ನೀಡಿದ್ದರು, ಖಾದಿಯು ಸ್ವಾವಲಂಬನೆ, ಸರಳತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿತ್ತು. ಖಾದಿ ಧರಿಸುವುದರಿಂದ ಪ್ರತಿ ಭಾರತೀಯ ಪ್ರಜೆಯೂ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕೆ ತನ್ನ ಕೊಡುಗೆಯನ್ನು ನೀಡಬಹುದು ಮತ್ತು ಹಳ್ಳಿಗಳಲ್ಲಿ ಉದ್ಯೋಗ ಒದಗಿಸುವ ಮೂಲಕ ಹಳ್ಳಿಗಳ ಬಲವರ್ಧನೆಗೆ ಕಾರಣವಾಗಬಹುದು ಎಂದು ಗಾಂಧೀಜಿ ನಂಬಿದ್ದರು ಅದನ್ನೆಲ್ಲಾ ಇಲ್ಲಿ ಪ್ರತಿಬಿಂಬಿಸಲಾಗುತ್ತದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ ಹಾಗೂ ಇನ್ನಿತರ ಖಾದಿ ಮಂಡಳಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Share this with Friends

Related Post