Sat. Mar 7th, 2026

ಇಡಿ ಸಮನ್ಸ್ ವಿರುದ್ಧ ಕಾನೂನಾತ್ಮಕವಾಗಿ ಏನು ಮಾಡಬೇಕೋ ಮಾಡುತ್ತೇವೆ: ಡಿಸಿಎಂ ಡಿಕೆ ಶಿವಕುಮಾರ್

Share this with Friends

ಬೆಂಗಳೂರು:ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಇಡಿ ಕಿರುಕುಳ ನೀಡುತ್ತಿದೆ, ಶುಕ್ರವಾರ ನನಗೆ ಹಾಗೂ ನನ್ನ ಸಹೋದರನಿಗೆ ನೋಟಿಸ್ ಬಂದಿದೆ. ನೋಟಿಸ್ ಅನ್ನು ವಿವರವಾಗಿ ತಿಳಿದುಕೊಂಡು ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,”ನಾವು ತೆರಿಗೆ ಪಾವತಿ ಮಾಡುತ್ತಿದ್ದೇವೆ. ನಮ್ಮ ಹಣವನ್ನು ನಮಗೆ ಬೇಕಾದವರಿಗೆ ನೀಡುತ್ತೇವೆ. ಕಿರುಕುಳ ನೀಡಲು ಪಿಎಂಎಲ್ ಎ ಪ್ರಕರಣ ಕೂಡ ದಾಖಲಿಸಿದ್ದರು. ಆನಂತರ ಏನಾಯಿತು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ನೀಡುವುದು,  ಜತೆಗೆ ಗೊಂದಲ ಮೂಡಿಸುವುದು ಇದರ ಉದ್ದೇಶ” ಎಂದರು.

“ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ನೋಟಿಸ್ ನೀಡಿದೆ. ನ್ಯಾಷನಲ್ ಹೆರಾಲ್ಡ್, ಯಂಗ್ ಇಂಡಿಯಾ ಇವು ನಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥೆಗಳು. ನಾವು ಕಾಂಗ್ರೆಸ್ಸಿಗರಾದ ಕಾರಣಕ್ಕೆ ಈ ಸಂಸ್ಥೆಗಳು ಕಷ್ಟ ಕಾಲದಲ್ಲಿದ್ದಾಗ ನಮ್ಮ ಟ್ರಸ್ಟ್ ಗಳಿಂದ ದೇಣಿಗೆ ನೀಡಿದ್ದೇವೆ. ನಮ್ಮಂತೆ ಅನೇಕ ಜನರು ಸಹಾಯ ಮಾಡಿದ್ದಾರೆ”.ಆದರೆ ನಾವು “ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ ಕಿರುಕುಳ ನೀಡಲಾಗುತ್ತಿದೆ. ಇದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ” ಎಂದರು.

“ನಾವು ಮೊದಲಿನಿಂದಲೂ ತನಿಖೆಗೆ ಸಹಕರಿಸುತ್ತಲೇ ಬಂದಿದ್ದೇವೆ. ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಇಷ್ಟೆಲ್ಲಾ ಆದರೂ ಇ.ಡಿ. ಚಾರ್ಜ್ ಶೀಟ್ ಹಾಕಿರೋದು ಏಕೆ ಎಂಬುದೇ ಗೊತ್ತಿಲ್ಲ. ಇದರಲ್ಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಾವು ಕಾನೂನಾತ್ಮಕವಾಗಿ ನ್ಯಾಯಲಯದಲ್ಲಿ ಹೋರಾಟ ಮಾಡುತ್ತೇವೆ”.”ನನಗೆ ಹಾಗೂ ನನ್ನ ತಮ್ಮ ಡಿ.ಕೆ.ಸುರೇಶ್ ಗೆ ಇಡಿ ಸಮನ್ಸ್ ನೀಡಿದೆ. ಈಗಾಗಲೇ ನಾವು ಇದಕ್ಕೆ ಹಿಂದೆಯೇ ಉತ್ತರ ಕೊಟ್ಟಿದ್ದೆವು. ಆದರೂ ನಮಗೆ ಸಮನ್ಸ್ ನೀಡಿರುವುದು ಆಘಾತಕಾರಿ. ದೆಹಲಿ ಪೊಲೀಸರು ಡಿಸೆಂಬರ್ 19 ನೇ ತಾರೀಕಿನ ಒಳಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ” ಎಂದು ಹೇಳಿದರು.


Share this with Friends

Related Post