ಬೆಂಗಳೂರು:ನಾವಾಗಿಯೇ ಹೈಕಮಾಂಡ್ ನಾಯಕರ ಭೇಟಿಗೆ ತೆರಳುವುದಿಲ್ಲ, ಹೈಕಮಾಂಡ್ ನಾಯಕರೇ ಆಹ್ವಾನಿಸಿದಲ್ಲಿ ಹೋಗಿ ಭೇಟಿ ಮಾಡಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿಗಳನ್ನು ಮೊದಲು ಉಪಹಾರಕ್ಕೆ ಬನ್ನಿ ಎಂದು ನಾನು ಕರೆದಿದ್ದೆ ಆದರೆ ಮೊದಲು ನಮ್ಮ ಮನೆಗೆ ಬನ್ನಿ ಎಂದಿದ್ದರು ಹಾಗಾಗಿ ಅವರ ಮನೆಗೆ ಹೋಗಿದ್ದೆ ಆಗಲೇ ನಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದೆ, ಇಂದು ಬಹಳ ಸಂತೋಷದಿಂದ ಬಂದರು, ಮೈಸೂರು ಶೈಲಿಯ ರುಚಿಯ ಉಪಹಾರ ಕೊಟ್ಟಿದ್ದೇವೆ,ಬ್ರೇಕ್ ಫಾಸ್ಟ್ ಜತೆ ರಾಜಕೀಯವಾಗಿಯೂ ಚರ್ಚೆ ಮಾಡಿದ್ದೇವೆ.ಪರಿಷತ್ ನ 4 ಸ್ಥಾನದ ಕುರಿತು ನಾವಿಬ್ಬರೂ ಮಾತನಾಡಿ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದೇವೆ ಆ ವಿಚಾರವನ್ನು ಚರ್ಚೆ ಮಾಡಿದ್ದೇವೆ. ಪಕ್ಷ ಸರ್ಕಾರದ ವಿಚಾರ ಚರ್ಚೆ ಮಾಡಿದ್ದೇವೆ ಎಂದರು.
ಡಿ.8 ರಿಂದ ಸದನ ನಡೆಯಲಿದೆ ಶಾಸಕರಿಗೆ ಯಾವ ಸಂದೇಶ ಕೊಡಬೇಕು ಯಾವ ರೀತಿ ಹೋರಾಟ ಮಾಡಬೇಕು ಬಿಜೆಪಿಯವರು ಯಾವ ಹೋರಾಟ ತರುತ್ತಾರೋ ಅದನ್ನು ನಾವು ಎದುರಿಸುತ್ತೇವೆ ಅದಕ್ಕೆ ನಾವು ಸಿದ್ಧರಿದ್ದೇವೆ ನಮ್ಮೆಲ್ಲಾ ಶಾಸಕರಿಗೂ ಇದಕ್ಕೆ ಒಳ್ಳೆಯ ಅವಕಾಶವಿದೆ. ವಿರೋಧಪಕ್ಷಗಳು ಯಾವ ವಿಷಯವನ್ನು ತಂದರೂ ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದರು.
ಸಂಸದರ ಸರ್ವ ಪಕ್ಷ ಸಭೆ ಬಗ್ಗೆ ಚರ್ಚೆ ಮಾಡಿದ್ದೇವೆ.ಡಿಸೆಂಬರ್ ಎಂಟರಂದು ದೆಹಲಿಗೆ ಹೋಗಿ ಸಭೆ ನಡೆಸಿ ವಾಪಸ್ ಬರಬೇಕು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದೇವೆ.ಕಾವೇರಿ ತೀರ್ಪು ಬಂದಿದೆ,ಮೆಕ್ಕೆಜೋಳ ವಿಚಾರವಿದೆ ಕೇಂದ್ರದಿಂದ ನಮಗೆ ಬರಬೇಕಾದ ಅನುದಾನದ ಬಗ್ಗೆ ಚರ್ಚಿಸಬೇಕಿದೆ ಎಲ್ಲಾ ಪಕ್ಷದವರನ್ನು ಕರೆದುಕೊಂಡು ಹೋಗಿ ಸಭೆ ಮುಗಿಸಿ ವಾಪಸ್ ಬರಬೇಕು ಎಂದುಕೊಂಡಿದ್ದೇವೆ ಎಂದರು.

