Fri. Mar 6th, 2026

ಮನರೇಗಾ ಮರು ಸ್ಥಾಪ‌ನೆಗೆ ಆಗ್ರಹಿಸಿ ನಾಳೆ ರಾಜಭವನ ಚಲೋ: ಡಿಸಿಎಂ ಡಿಕೆ ಶಿವಕುಮಾರ್

Share this with Friends

ಬೆಂಗಳೂರು:ಮನರೇಗಾ ಮರು ಸ್ಥಾಪಿಸುವವರೆಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಅದರ ಭಾಗವಾಗಿಯೇ ಮನರೇಗಾ ಉಳಿಸುವ ಸಲುವಾಗಿ ಮಂಗಳವಾರ ರಾಜಭವನ ಚಲೋ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಮನರೇಗಾವನ್ನು ನಾಶ ಮಾಡುವ ಕಾನೂನನ್ನು ಹಿಂಪಡೆಯಬೇಕು. ರೈತರ ಕರಾಳ ಕಾಯ್ದೆಗಳನ್ನು ಹೇಗೆ ಹಿಂಪಡೆಯಲಾಯಿತೋ ಅದೇ ರೀತಿ ಇದನ್ನೂ ಹಿಂಪಡೆಯಬೇಕು. ಹಿಂಪಡೆಯುವವರೆಗೂ ಹೋರಾಟ ಮುಂದುವರೆಸಲಾಗುವುದು.ಮನರೇಗಾ ಉಳಿಸಲು ನಾಳೆ ರಾಜಭವನ ಚಲೋ ಕೂಡ ನಡೆಸಲಿದ್ದೇವೆ ಎಂದರು.

ನಾವು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಬೇಕಿತ್ತು. ಆದರೆ ನಾವು ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ. ನಮ್ಮ ಎಲ್ಲಾ ಶಾಸಕರು, ಪರಿಷತ್ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು. ಈ ಹೋರಾಟ ಪ್ರತಿ ಪಂಚಾಯ್ತಿಯಲ್ಲಿರುವ ನರೇಗಾ ಉದ್ಯೋಗ ಕಾರ್ಡ್ ಹೊಂದಿರುವವರಿಗೆ ಈ ಹೋರಾಟ ತಲುಪಬೇಕು. ರಾಜ್ಯ, ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಈ ಪ್ರತಿಭಟನೆ ನಡೆಸಲಾಗುವುದು. ನರೇಗಾ ಕಾರ್ಮಿಕರ ಜೊತೆಗೆ ಪಂಚಾಯಿತಿಗಳ ಹಾಲಿ, ಮಾಜಿ ಸದಸ್ಯರುಗಳು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಬೇಕು. ಎಲ್ಲಿ ಶಾಸಕರಿಲ್ಲವೋ ಅಲ್ಲಿ ವಿಧಾನ ಪರಿಷತ್ ಸದಸ್ಯರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು

ಮಹಾತ್ಮಗಾಂಧಿ ಅವರ ಹೆಸರಿನಲ್ಲಿ ಪ್ರಾರಂಭವಾದ ಯೋಜನೆ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕಿಗೆ ಖಾತ್ರಿ ನೀಡಿತ್ತು. ಆದರೆ ಈ ಹಕ್ಕು ಈಗ ಮೊಟಕಾಗಿದೆ. ಆದಕಾರಣ ಇಡೀ ದೇಶದ ಉದ್ದಗಲಕ್ಕೂ ಈ ಬಗ್ಗೆ ಹೋರಾಟ ರೂಪಿಸಲಾಗಿದೆ ರಾಜ್ಯದಲ್ಲಿಯೂ ಪರಿಣಾಮಕಾರಿಯಾಗಿ ಹೋರಾಟ ನಡೆಸಲಾಗುತ್ತದೆ. ವಿಧಾನಸಭೆಯಲ್ಲೂ ಇದರ ಬಗ್ಗೆ ಪ್ರತಿಭಟನೆ ಹಾಗೂ ನಿರ್ಣಯ ತೆಗೆದುಕೊಳ್ಳಲು ನಾವು ಸಜ್ಜಾಗಿದ್ದೇವೆ ಎಂದರು‌.

2028 ಕ್ಕೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇಂತಹ ಒಳ್ಳೆ ದಿನ ಏಕೆ ಅಶುಭ ಮಾತನ್ನಾಡುವುದು, ಆ ವಿಚಾರ ಬೇಡ ಬಿಡಿ” ಎಂದರು.

ನಮ್ಮ ಸೇವೆ ಜನರಿಗಾಗಿಯೇ ಹೊರತು ಕುಟುಂಬಕ್ಕಾಗಿ ಅಲ್ಲ:

ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿರುವ ಬಗ್ಗೆ ಕೇಳಿದಾಗ, “ನಾವು ಸೇವೆ ಮಾಡುತ್ತಿರುವುದು ನಾಡಿನ ಜನತೆಗಾಗಿ. ಕುಟುಂಬಕ್ಕಾಗಿಯಲ್ಲ. ಕುಟುಂಬದ ಆಸೆ, ಭಾವನೆಗಳು, ತೊಂದರೆಯಲ್ಲಿ ಇರುವದರ ಬಗ್ಗೆ ಅವರು ಮಾತನಾಡಿಕೊಳ್ಳಲಿ. ನಾವು ಈ ದೇಶದ ಜನತೆಯ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದೇವೆ” ಎಂದರು‌.

ಹಾಸನ ಜಿಡಿಎಸ್ ಸಮಾವೇಶದ ಉದ್ದಕ್ಕೂ ತಮ್ಮನ್ನು ನೆನಪಿಸಿಕೊಂಡಿದ್ದರ ಬಗ್ಗೆ ಕೇಳಿದಾಗ, “ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಶಕ್ತಿ ಬರುವುದಿಲ್ಲ, ಜೀವ ಬರುವುದಿಲ್ಲ, ಧೈರ್ಯ ಬರುವುದಿಲ್ಲ. ಅದಕ್ಕೆ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ” ಎಂದರು.

ಮನೆಗೆ ನುಗ್ಗಿ ಬಂಧಿಸಲಾಯಿತು ಎನ್ನುವ ದೇವೆಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ಈ ದೇಶದಲ್ಲಿ ಏನೇನು ಕಾನೂನು ಇದೆಯೋ ಅದೆಲ್ಲವೂ ಎಲ್ಲರಿಗೂ ಒಂದೇ. ಯಾರಿಗೆ ಏನೇನು ಕಾನೂನು ಮಾಡಬೇಕು ಅನ್ನೋದಕ್ಕೆ ನೀವೇ ಉತ್ತರ ನೀಡಬೇಕು” ಎಂದು ಹೇಳಿದರು.

ತಮ್ಮ ಭಾಷಣದ ವೇಳೆ ಸದನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿಯವರಿಗೆ ರಾಜ್ಯಪಾಲರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ರಾಜ್ಯಪಾಲರು ಭಾಷಣ ಓದಿ, ರಾಷ್ಟ್ರಗೀತೆ ಆಗುವ ತನಕ ಇರಬಹುದಿತ್ತು. ರಾಜ್ಯಪಾಲರಿಗೆ ನರೇಗಾ ಬಗೆಗಿನ ಭಾಷಣ ಓದುವುದಕ್ಕೆ ಇಷ್ಟವಿಲ್ಲದಿದ್ದರೆ ಹಾಗೆ ಇರಬಹುದಿತ್ತು. ಜತೆಗೆ ಸಾಕಷ್ಟು ಬೇರೆ  ಅವಕಾಶಗಳೂ ಇದ್ದವು. ರಾಜ್ಯಪಾಲರು ಸರ್ಕಾರ ನೀಡಿದ ಭಾಷಣ ಓದುವುದು ಸಂವಿಧಾನ ರಕ್ಷಣೆಯ ಕರ್ತವ್ಯ. ನಮ್ಮಲ್ಲಿ ಅಲ್ಲದೇ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಆಗಿದೆ” ಎಂದರು.


Share this with Friends

Related Post