Mon. Dec 23rd, 2024

ಮೂಲಂಗಿ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು..?

Radish
Share this with Friends

ಪೌಷ್ಠಿಕಾಂಶದ (Nutrition) ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಡೆಗಣಿಸಲ್ಪಡುವ ತರಕಾರಿ ಮೂಲಂಗಿಯಾಗಿದೆ (Radish). ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಮೂಲಂಗಿಯನ್ನು ಬಳಸುತ್ತಾರೆ. ಮೂಲಂಗಿ ಅನೇಕ ಆರೋಗ್ಯ ಪ್ರಯೋಜನಗಳನ್ನು (Health Benefits) ಹೊಂದಿದೆ. ಮೂಲಂಗಿ ನಿಸ್ಸಂದೇಹವಾಗಿ ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶದೊರಕಿಸುವ ಹಾಗೂ ಪ್ರಯೋಜನಗಳ ಮೂಲವಾಗಿದೆ. ಮೂಲಂಗಿ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ ಅಂದ್ರೂ ತಪ್ಪಾಗಲ್ಲ. ಜೀರ್ಣಕ್ರಿಯೆಯನ್ನು ಬೆಂಬಲಿಸುವುದರಿಂದ ಹಿಡಿದು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವವರೆಗೆ ಮತ್ತು ಹೃದಯದ ಆರೋಗ್ಯಕ್ಕೆ ಸಮರ್ಥವಾಗಿ ಕೊಡುಗೆ ನೀಡುವವರೆಗೆ, ಮೂಲಂಗಿಯು ನಿಮ್ಮ ದೈನಂದಿನ ಆಹಾರದಲ್ಲಿ ಸೇರಲು ಅರ್ಹವಾಗಿದೆ.

ಪ್ರಯೋಜನಗಳು :
✦ ಮೂಲಂಗಿ ಜೀರ್ಣಕಾರಿ. ಊಟದಲ್ಲಿ ಮೂಲಂಗಿಯ ಪಚ್ಚಡಿ ಉಪಯೋಗಿಸುವುದರಿಂದ ಉಂಡ ಆಹಾರ ಚೆನ್ನಾಗಿ ಜೀರ್ಣವಾಗುವುದು. ಊಟದ ನಂತರ ಹಸಿ ಮೂಲಂಗಿ ತಿನ್ನುವುದರಿಂದಲೂ ಉಂಡ ಆಹಾರ ಪಚನವಾಗುವುದು.
✦ ಬೆಂದ ಮೂಲಂಗಿ ಹೊಟ್ಟೆಯಲ್ಲಿ ಹೆಚ್ಚು ಗಾಳಿ ಉತ್ಪತ್ತಿ ಮಾಡುತ್ತದೆ. ಆದುದರಿಂದ ಹಸಿ ಮೂಲಂಗಿಯೇ ತಿನ್ನಲು ಯೋಗ್ಯ.
✦ ಕಣ್ಣು, ಕಿವಿ, ಮೂಗು, ಗಂಟಲು ರೋಗಗಳಲ್ಲಿ ಮೂಲಂಗಿ ಅತ್ಯಂತ ಗುಣಕಾರಿ. ಆದುದರಿಂದ ಹಸಿ ಮೂಲಂಗಿ ಸೇರಬೇಕಾದ್ದು ಅತ್ಯಗತ್ಯ. ರೊಟ್ಟಿ ಅಥವಾ ಚಪಾತಿಯೊಂದಿಗೆ ಹಸಿ ಮೂಲಂಗಿ ಕಚ್ಚಿ ತಿನ್ನಬಹುದು.
✦ ಹಸಿ ಮೂಲಂಗಿ ಕೊಸಂಬರಿಯನ್ನು ಆಗಾಗ ಸೇವಿಸುತ್ತಿದ್ದರೆ ನೆಗಡಿ ಬರುವ ಸಂಭವ ಕಡಿಮೆಯಾಗುತ್ತದೆ.
✦ ಅಜೀರ್ಣ, ಮಲಬದ್ಧತೆ, ದೃಷ್ಟಿಮಾಂದ್ಯ, ಮೂಲವ್ಯಾಧಿ, ಕಾಮಾಲೆ ಇತ್ಯಾದಿ ರೋಗಗಳಲ್ಲಿ ಹಸಿ ಮೂಲಂಗಿಯ ಹೋಳುಗಳಿಗೆ ಕಾಳು ಮೆಣಿಸಿನಪುಡಿ, ಉಪ್ಪು, ನಿಂಬೆ ರಸ ಸೇರಿಸಿ ಸೇವಿಸುವುದರಿಂದ ಗುಣವುಂಟು
✦ ಹಸಿದ ಹೊಟ್ಟೆಯಲ್ಲಿ ಮೂಲಂಗಿ ತಿನ್ನಬಾರದು ಮತ್ತು ಹೆಚ್ಚು ಬೇಯಿಸಿದ ಮೂಲಂಗಿಯನ್ನು ಸರ್ವಥಾ ತಿನ್ನಬಾರದು.
✦ ಮೂಲವ್ಯಾಧಿಯಿಂದ ನರಳುವ ರೋಗಿಗಳು ಹಸಿ ಮೂಲಂಗಿ ಯಥೇಚ್ಚವಾಗಿ ತಿನ್ನುವುದರಿಂದ ಪ್ರಯೋಜನವಿದೆ.
✦ ಮೂಲಂಗಿ ಮತ್ತು ಉಪ್ಪು ನುಣ್ಣಗೆ ಅರಿದು ಚೇಳು ಕುಟುಕಿದ ಸ್ಥಳಕ್ಕೆ ಹಚ್ಚಿದರೆ ಚೇಳಿನ ವಿಷ ಏರುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಉರಿ ಮತ್ತು ಚಳುಕು ನಿಂತು ಹೋಗುತ್ತದೆ.
✦ಮೂಲಂಗಿ ಸೊಪ್ಪಿನಲ್ಲಿ ಉತ್ತಮ ಪೋಷಕಾಂಶಗಳಿರುವ ಕಾರಣ ಸೊಪ್ಪನ್ನು ಎಸೆಯಬಾರದು. ಸೊಪ್ಪಿನಿಂದ ಪಲ್ಯ ತಯಾರಿಸಿ ಸೇವಿಸುವುದು ಆರೋಗ್ಯಕರ.
✦ ಮೂಲಂಗಿ ಸೊಪ್ಪನ್ನು ಜಜ್ಜಿ ಹಿಂಡಿ ರಸ ತೆಗೆಯಿರಿ. ಆ ರಸ ಸೇವಿಸುವುದರಿಂದ ಕಟ್ಟು ಮೂತ್ರ ನಿವಾರಣೆಯಾಗುತ್ತದೆ.
✦ ಒಂದು ಟೀ ಚಮಚ ಮೂಲಂಗಿ ಬೀಜವನ್ನು ನೀರಿನಲ್ಲಿ ನುಣ್ಣಗೆ ಅರೆದು, ಒಂದು ಬಟ್ಟಲು ಮಜ್ಜಿಗೆಯಲ್ಲಿ ಕದಡಿ ಸೇವಿಸುವುದರಿಂದ ತಡೆದ ಮುಟ್ಟು ಕ್ರಮಬದ್ಧವಾಗುತ್ತದೆ.
✦ಮೂಲಂಗಿ ಬೀಜವನ್ನು ಮೊಸರಿನಲ್ಲಾಗಲೀ, ನಿಂಬೆ ರಸದಲ್ಲಾಗಲೀ, ಸ್ವಮೂತ್ರದಲ್ಲಾಗಲಿ ಅರೆದು ಹಚ್ಚುವುರಿಂದ ಗಜಕರ್ಣ, ಹುಳುಕಡ್ಡಿ, ತುರಿಕಜ್ಜಿ ಇತ್ಯಾದಿ ಚರ್ಮರೋಗಗಳು ಗುಣವಾಗುತ್ತವೆ.

ಎಚ್ಚರಿಕೆ :
ಮೂಲಂಗಿ ಅತಿ ಹೆಚ್ಚು ಪೌಷ್ಟಿಕಾಂಶವಿರುವ ತರಕಾರಿ. ಇದು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ತೂಕ ಇಳಿಸಲು, ಉತ್ತಮ ಜೀರ್ಣಕ್ರಿಯೆಗಾಗಿ ಮತ್ತು ಹೃದಯದ ಆರೋಗ್ಯಕ್ಕಾಗಿ ಮೂಲಂಗಿ ಉತ್ತಮ ತರಕಾರಿ. ಆದರೆ, ಮೂಲಂಗಿಯ ಅತಿಯಾದ ಸೇವನೆಯು ಹಾನಿಕಾರಕವಾಗಿದೆ. ಮೂಲಂಗಿಯಲ್ಲಿ ನಾರಿನಂಶ ಹೆಚ್ಚಿದ್ದು, ಕೆಲವರಲ್ಲಿ ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ ಉಂಟು ಮಾಡಬಹುದು. ಇನ್ನು ಮೂಲಂಗಿಯಲ್ಲಿ ಥಿಯೋಸೈನೈಡ್ ಎಂಬ ಸಂಯುಕ್ತ ಅಡಗಿರುತ್ತದೆ. ಇದು ಥೈರಾಯ್ಡ್ ಗ್ರಂಥಿಗೆ ಹಾನಿಕಾರಕವಾಗಿದೆ.


Share this with Friends

Related Post