ಬೆಂಗಳೂರು: ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಪೊಲೀಸರೇ ದರೋಡೆ ಮಾಡುತ್ತಾರೆ ಯಾಕೆ ಹೀಗೆ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಕೆಲ ಪೊಲೀಸರೇ ದರೋಡೆ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುತ್ತಾರೆ. ಹಿಂದೆ ಅವರು ಐದು ವರ್ಷ ಸಿಎಂ ಆಗಿದ್ದಾಗ ಮೈಸೂರಿನ ಬಿಳಿಕೆರೆಯಲ್ಲಿ ಬಸ್ಸಿನಲ್ಲಿ ಹಣವನ್ನು ದೋಚಲಾಗಿತ್ತು. ಆ ಪ್ರಕರಣದಲ್ಲಿಯೂ ಪೊಲೀಸ್ ಅಧಿಕಾರಿಯೊಬ್ಬ ಭಾಗಿಯಾಗಿದ್ದ. ಇತ್ತೀಚೆಗೆ ಎಟಿಎಂ ಹಣ ದರೋಡೆ ಮಾಡಿದ ಪ್ರಕರಣದಲ್ಲಿಯೂ ಪೊಲೀಸ್ ಒಬ್ಬ ಭಾಗಿ ಆಗಿದ್ದಾನೆ. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಗ ಮಾತ್ರವೇ ಯಾಕೆ ಹೀಗೆ ಆಗುತ್ತದೆ? ಎಂದು ಪ್ರಶ್ನಿಸಿದರು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಉಗ್ರರ ಕೈಗೆ ಸ್ಮಾರ್ಟ್ ಫೋನ್ ಹೋಗುತ್ತಿದೆ. ಅದನ್ನು ಗೃಹ ಸಚಿವರು ಖುದ್ದು ಪರಿಶೀಲನೆ ಮಾಡಿದ್ದರು. ಇತ್ತೀಚೆಗೆ ಇನ್ನೊಬ್ಬ ಮಂತ್ರಿ ಜೈಲಿಗೆ ಭೇಟಿ ನೀಡಿದ್ದರು. ಅವರು ಏನು ಕಾರಾಗೃಹದಲ್ಲಿ ಏನು ಪರಿಶೀಲನೆ ಮಾಡಿದರೋ ಗೊತ್ತಿಲ್ಲ. ಆದರೆ ಅವರು ಭೇಟಿ ನೀಡಿದ ನಂತರ ಜೈಲಿನಲ್ಲಿ ಡಿಸ್ಟಿಲರಿಯೇ ನಡೆಯುತ್ತಿರುವುದು ಪತ್ತೆ ಆಯಿತು! ಅವರು ಏನು ತಪಾಸಣೆ ಮಾಡೋಕೆ ಹೋಗಿದ್ದರು? ಸ್ವತಃ ಅವರೇ ಜೈಲ್ ಡಿಸ್ಟಿಲರಿ ಡ್ರಿಂಕ್ಸ್ ಗುಣಮಟ್ಟ ಪರಿಶೀಲನೆ ಮಾಡೋಕೆ ಹೋಗಿದ್ದರಾ ಹೇಗೆ? ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
2028ರ ಚುನಾವಣೆ ತುಂಬಾ ದೂರಾ ಇದೆ. ತೇಜಸ್ವಿ ಯಾದವ್ ಬಿಹಾರದಲ್ಲಿ ಪ್ರಮಾಣ ವಚನ ದಿನಾಂಕವನ್ನೇ ನಿಗದಿ ಮಾಡಿದ್ದರು. ಆದರೆ ಅಲ್ಲಿ ಏನು ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು 2028 ರ ಎಲೆಕ್ಷನ್ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಎಲ್ಲಾ ರೀತಿಯಲ್ಲಿಯೂ ಕಾಂಗ್ರೆಸ್ ರಾಜ್ಯದಲ್ಲಿ ವಿಫಲವಾಗಿದೆ. ಜನರ ಪರವಾಗಿ ದನಿಯೆತ್ತಲಿಕ್ಕಾಗಿಯೇ ನಾವು ಇಲ್ಲಿ ಸಭೆ ಸೇರಿದ್ದೇವೆ. ಡಿಸೆಂಬರ್ 8ರಿಂದ ಬೆಳಗಾವಿ ಅಧಿವೇಶನ ನಡೆಯುತ್ತದೆ. ಎರಡು ಪಕ್ಷಗಳು ಪರಿಣಾಮಕಾರಿಯಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಿವೆ. ಬೆಂಗಳೂರಿನಿಂದ ಶಾಸಕರು ಕಾಟಾಚಾರಕ್ಕೆ ಬರುತ್ತಾರೆ ಎನ್ನುವ ಅಭಿಪ್ರಾಯ ಬೇಡ. ಉತ್ತರ ಕರ್ನಾಟಕದ ಜನ ಕಷ್ಟದಲ್ಲಿದ್ದಾರೆ. ನೆರೆ ಬಂದು ಅನೇಕ ಜಿಲ್ಲೆಗಳ ಜನರು ಕಷ್ಟಕ್ಕೆ ಸಿಲುಕಿದ್ದರು. ಆಸ್ತಿ, ಮನೆಮಠ ಕಳೆದುಕೊಂಡ ಜನರ ನೆರವಿಗೆ ರಾಜ್ಯ ಸರ್ಕಾರ ಬಂದಿಲ್ಲ. ಕೇವಲ ಕೇಂದ್ರ ಸರ್ಕಾರವನ್ನು ದೂರುವ ಕೆಲಸ ಮಾಡುತ್ತಿದೆ. ತುಂಗಭದ್ರಾ ನೀರು ಬಳಕೆ ಮಾಡುವ ರೈತರಿಗೆ ಎರಡನೇ ಬೆಳೆಗೆ ನೀರು ಬಿಡುವುದಿಲ್ಲ ಎಂದು ಹೇಳುತ್ತಿದೆ ಸರ್ಕಾರ. ಈ ವಿಷಯವನ್ನು ಎರಡು ಪಕ್ಷಗಳ ಶಾಸಕರು ಸದನದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸರ್ಕಾರದ ಬಗ್ಗೆ ಸುಳ್ಳು ಹೇಳುತ್ತಿವೆ ಎಂದು ಸಿಎಂ ಹೇಳಿರುವ ಬಗ್ಗೆ ಕೆಂಡ ಕಾರಿದ ಸಚಿವ ಕುಮಾರಸ್ವಾಮಿ ಅವರು; ಸಿದ್ದರಾಮಯ್ಯ ಅವರು ಒಬ್ಬರೇ ಸತ್ಯ ಹರಿಶ್ಚಂದ್ರ. ಪಾಪ.. ಸತ್ಯ ಹರಿಶ್ಚಂದ್ರ ಕಾಡಿಗೆ ಹೋಗಬೇಕಾದರೆ ಸಿದ್ದರಾಮಯ್ಯನ ಹುಂಡಿ ಮೇಲೆ ಹೋಗಿರಬೇಕು. ಅದಕ್ಕೆ ಸಿದ್ದರಾಮಯ್ಯ ಹೀಗೆ ಹೇಳುತ್ತಿರಬಹುದು ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

