Fri. Mar 6th, 2026

ಬೆಂಗಳೂರು ವಿಷಯಗಳನ್ನೇ ಚರ್ಚಿಸುವುದಾದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಯಾಕೆ? :ಅಶೋಕ್

Share this with Friends

ಬೆಂಗಳೂರು: ಬೆಳಗಾವಿ ಅಧಿವೇಶನದ ಅಜೆಂಡಾದಲ್ಲಿ  ಬೆಂಗಳೂರಿನ ವಿಚಾರಗಳನ್ನೇ ಹಾಕಿದ್ದು,ಅಲ್ಲಿಯೂ ಬೆಂಗಳೂರು ವಿಚಾರಗಳನ್ನೇ ಕೈಗೆತ್ತಿಕೊಳ್ಳುವುದಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಔಚಿತ್ಯ ಏನು? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ

ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯು ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಇಂದು ನಡೆಯಿತು. ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಹಾಲಿ ಶಾಸಕರು ಮೃತಪಟ್ಟ ಕಾರಣ ಒಂದು ದಿನ ನಡೆಯಲಾರದು; ಆಡಳಿತ ಪಕ್ಷ ಕಾಂಗ್ರೆಸ್ ತನ್ನ ಮರ್ಜಿಗೋಸ್ಕರ, ಮಸೂದೆ ಅಂಗೀಕಾರಕ್ಕೆ ಈ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ, ಅದು 8 ದಿನಕ್ಕಿಂತ ಹೆಚ್ಚು ಕಾಲ ನಡೆಯಲಾರದು ಎಂದರು.

ಬೆಂಗಳೂರು ಅಭಿವೃದ್ಧಿ, ಬೆಂಗಳೂರು ಪಾಲಿಕೆ- ಈ ಥರದ ವಿಚಾರಗಳನ್ನು ತಂದಿದ್ದಾರೆ.ಬೆಂಗಳೂರಿನ ವಿಚಾರಗಳನ್ನೇ ಕೈಗೆತ್ತಿಕೊಳ್ಳುವುದಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಔಚಿತ್ಯ ಏನು?ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಅವರಿದ್ದಾಗ ಅಲ್ಲೊಂದು ಭವನ ಆಗಬೇಕು; ಉತ್ತರ ಕರ್ನಾಟಕದ ಚರ್ಚೆ ಆಗಬೇಕೆಂದು ಅಧಿವೇಶನ ಮಾಡುತ್ತಿದ್ದರು. 20 ದಿನವಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ; ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಿ ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕದ ವಿಚಾರವನ್ನು ಕೊನೆಗೆ ಪರಿಗಣಿಸುತ್ತಾರೆ. ಕೊನೆಯಲ್ಲಿ ಮುಖ್ಯಮಂತ್ರಿ ತಿಪ್ಪೆಸಾರಿಸಿ ಭಾಷಣ ಮಾಡಿ ಹೋಗಿದ್ದರು. ಕೈಗಾರಿಕೆ ಸ್ಥಾಪನೆ, ಶಾಲಾರಂಭ, ನೀರಾವರಿ ಯೋಜನೆಗೆ ಹಣದ ವಿಚಾರದಲ್ಲಿ ಮೋಸ ಮಾಡಿದ್ದಾರೆ. ತುಂಗಭದ್ರಾ ಡ್ಯಾಂ ಗೇಟ್ ಕಿತ್ತುಹೋಗಿ ಒಂದು ವರ್ಷವಾಗಿದೆ. 12 ಕೋಟಿ ಕೊಡಬೇಕಿದ್ದು, ಅದನ್ನು ಕೊಡುವ ಯೋಗ್ಯತೆ ಇಲ್ಲ ಎಂದು ಆಕ್ಷೇಪಿಸಿದರು.

ಎನ್‍ಡಿಎ ಅಂಗ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಹಿಂದಿನ ಅಧಿವೇಶನಗಳಲ್ಲೂ ಜೊತೆಯಾಗಿ ಕೆಲಸ ಮಾಡಿವೆ. ಮುಡಾ ಹಗರಣ, ನಿವೇಶನ ವಾಪಸಾತಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಮಂತ್ರಿ ರಾಜೀನಾಮೆ ವಿಚಾರ, ಕ್ರಿಕೆಟ್ ಸ್ಟೇಡಿಯಂನಲ್ಲಿ ಅಮಾಯಕ 11 ವಿದ್ಯಾರ್ಥಿಗಳ ದುರ್ಮರಣ- ಇವೆಲ್ಲ ವಿಚಾರಗಳಲ್ಲಿ ನಮ್ಮೆಲ್ಲ ಶಾಸಕರು, ಮೇಲ್ಮನೆ ಸದಸ್ಯರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.

ಸರಕಾರ ತಪ್ಪು ಹಾದಿಯಲ್ಲಿದೆ. ಜನರಿಗೆ ನೀಡಿದ ಭರವಸೆಗೆ ವಿರುದ್ಧವಾಗಿ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಶೇ 60 ಕಮಿಷನ್ ಸರಕಾರವಾಗಿ ಮಾರ್ಪಟ್ಟಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಕಾಂಗ್ರೆಸ್ಸಿನ ಕೇಂದ್ರ ಹೈಕಮಾಂಡಿಗೆ ಹಣ ಕಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.

ವಿಧಾನಸಭೆಗೆ ಸಂಬಂಧಿಸಿದ 10-12 ವಿಚಾರಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿದ್ದೇವೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಭೆಗೆ ಬಂದು ಮಾರ್ಗದರ್ಶನ ಮಾಡಿದ್ದಾರೆ. ಅದೇ ರೀತಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಫೋನ್ ಕರೆ ಮಾಡಿ ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವುಗಳನ್ನು ಪರಿಗಣಿಸಲಿದ್ದೇವೆ ಎಂದರು.


Share this with Friends

Related Post