Tue. Nov 5th, 2024

ಚುನಾವಣೆಯಲ್ಲಿ ಹೆಚ್ಚು ಸ್ಥಾನ ಸಿಗಲಿದೆ:ಸಿದ್ದರಾಮಯ್ಯ ವಿಶ್ವಾಸ

Share this with Friends

ಕಲಬುರಗಿ,ಏ.27: 5 ಗ್ಯಾರಂಟಿ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಲಬುರಗಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ,ಮೊದಲ ಹಂತದ ಚುನಾವಣೆ ಮುಗಿದಿದ್ದು, ಹೆಚ್ಚು ಸ್ಥಾನಗಳು ಸಿಗಲಿದೆ ಎಂಬ ವರದಿ ಬಂದಿದೆ,ಎಲ್ಲಾ ಅಭ್ಯರ್ಥಿಗಳು ಹಾಗೂ ಜಿಲ್ಲಾ ಸಚಿವರೊಂದಿಗೆ ಮಾತನಾಡಿದ್ದೇನೆ,ಎಲ್ಲರೂ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡಿದ್ದಾರೆ ಅಂತಲೇ ಹೇಳಿದ್ದಾರೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಕೇಂದ್ರ ಸರ್ಕಾರದ 10 ವರ್ಷಗಳ ವೈಫಲ್ಯ ನಮ್ಮ ಸರ್ಕಾರದ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪ ಮಾಡುತ್ತಿದ್ದೇವೆ. ಜನರು ಆಸಕ್ತಿಯಿಂದ ನಮ್ಮ ಮಾತುಗಳನ್ನು ಆಲಿಸಿ, ಉತ್ಸಾಹವನ್ನು ತೋರುತ್ತಿರುವುದು ಪ್ರಚಾರದಲ್ಲಿ ಎದ್ದು ಕಾಣುತ್ತಿದೆ ಎಂದು ಸಿಎಂ ಹೇಳಿದರು.

ಹಿಂದುಳಿದವರಿಗೆ ಮೀಸಲಾತಿ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ,ಪ್ರಧಾನಿ ಮೋದಿ ಸುಳ್ಳೇ ಹೇಳುತ್ತಾರೆ ಎಂದರು.

ಮಂಡಲ್ ಆಯೋಗದ ವರದಿ ಜಾರಿಯಾದಾಗ ಮೀಸಲಾತಿ ವಿರೋಧಿಸಿದ್ದು, ಬಿಜೆಪಿಯವರೇನೆ,ಸಾಮಾಜಿಕ, ಶೈಕ್ಷಣಿಕವಾಗಿ ಹಿಂದಳಿದಿರುವ, ಅವಕಾಶ ವಂಚಿತರಾದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ.

ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ ಶೇ 10 ರಷ್ಟು ಮೀಸಲಾತಿ ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ. ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಲಾಗಿದೆ.

1992 ನೇ ಇಸವಿಯಲ್ಲಿ ಸುಪ್ರೀಂ ಕೋರ್ಟ್ ನ ಸಂವಿಧಾನ ಪೀಠವು ಮಂಡಲ್ ಆಯೋಗದ ವರದಿಯ ಶಿಫಾರಸುಗಳನ್ನು ಒಪ್ಪಿಕೊಂಡಿದ್ದು, ಮೀಸಲಾತಿಯ ಸೀಲಿಂಗ್ ಎಷ್ಟಿರಬೇಕೆಂದು ಕೂಡ ಹೇಳಿದೆ. ಮೀಸಲಾತಿ ಶೇ 50 ಕ್ಕಿಂತ ಹೆಚ್ಚಿರಬಾರದು ಎಂದು ಹೇಳಿದ್ದಾರೆ.

ಸಂವಿಧಾನದಲ್ಲಿಲ್ಲದಿದ್ದರೂ ಸೀಲಿಂಗ್ ನಿಗದಿ ಮಾಡಿದ್ದಾರೆ. ಮಂಡಲ್ ಆಯೋಗದ ವರದಿ ಜಾರಿಯಾಗಿದ್ದು, ಕೇಂದ್ರ ಮತ್ತು ರಾಜ್ಯಗಳಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಬೇಕೆಂದೂ ಹೇಳಿದೆ. ಮಂಡಲ್ ಆಯೋಗದ ವರದಿ ಜಾರಿಯಾದಾಗ ಮೀಸಲಾತಿ ವಿರೋಧಿಸಿದ್ದು, ಬಿಜೆಪಿಯವರು. ಶಾಲಾ ಕಾಲೇಜುಗಳ ಮಕ್ಕಳನ್ನು ಎತ್ತಿ ಕಟ್ಟಿ ಇದನ್ನು ವಿರೋಧಿಸಲು ಹೇಳಿ ಆತ್ಮಹತ್ಯೆಗೆ ಪ್ರೇರೇಪಿಸಿದ್ದರು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.


Share this with Friends

Related Post