ಬೆಂಗಳೂರು ದಕ್ಷಿಣ:ಅಧಿಕಾರ ಹಸ್ತಾಂತರದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸುವ ವಿಚಾರ ನನಗೆ ಗೊತ್ತಿಲ್ಲ ಆದರೆ ಇದು ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಇದನ್ನು ನಾನು ಬಹಿರಂಗ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕನಕಪುರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದ್ದಾರೆಯೇ ಎಂದು ಗೊತ್ತಿಲ್ಲ. ಇದು ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಸಿಎಂ ಸಿದ್ದರಾಮಯ್ಯ ಹಿರಿಯ ನಾಯಕರು, ನಮ್ಮ ಪಕ್ಷದ ಆಸ್ತಿ. ಅವರು ಸಿಎಂ ಆಗಿ ಏಳೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಮುಂದಿನ ಬಜೆಟ್ ಅನ್ನು ಅವರೇ ಮಂಡಿಸುವುದಾಗಿ ಹೇಳಿದ್ದಾರೆ. ಬಹಳ ಸಂತೋಷ. ಅವರು ವಿರೋಧ ಪಕ್ಷದ ನಾಯಕರಾಗಿ ಶ್ರಮಿಸಿದ್ದಾರೆ. ಪಕ್ಷ ಕಟ್ಟಿದ್ದಾರೆ. ನಾವೆಲ್ಲರೂ ಸೇರಿ 2028 ಹಾಗೂ 2029ರ ಚುನಾವಣೆ ಗುರಿಯತ್ತ ಗಮನ ಹರಿಸಬೇಕು” ಎಂದು ತಿಳಿಸಿದರು.
ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ಹೋಗಿದ್ದಾರೆ:
ಕೆಲ ಶಾಸಕರು ದೆಹಲಿಗೆ ತೆರಳಿದ್ದು, ನಿಮ್ಮನ್ನು ಸಿಎಂ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಳಿದಾಗ, “ಸಚಿವ ಸ್ಥಾನದ ಆಕಾಂಕ್ಷೆ ಇರುವವರು ಹೋಗಿದ್ದಾರೆ, ನನ್ನನ್ನು ಸಿಎಂ ಮಾಡುವ ಪ್ರಯತ್ನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರಿಗೆ ಕರೆ ಮಾಡಿಲ್ಲ, ಅವರನ್ನು ಕಳುಹಿಸಿಲ್ಲ. ಯಾಕೆ ಹೋದಿರಿ ಎಂದು ಪ್ರಶ್ನೆ ಮಾಡುವುದಿಲ್ಲ” ಎಂದರು.
ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತೇ ಎಂದು ಕೇಳಿದಾಗ, “ನಾನು ಆ ಬಗ್ಗೆ ಯಾಕೆ ಮಾತನಾಡಲಿ, ನೀವುಗಳೇ (ಮಾಧ್ಯಮಗಳು) ಏನೇನೋ ಬರೆಯುತ್ತಿದ್ದೀರಿ” ಎಂದು ತಿಳಿಸಿದರು.
ಅಧಿಕಾರ ಹಂಚಿಕೆ ವಿಚಾರವಾಗಿ ಬಸವರಾಜ ರಾಯರೆಡ್ಡಿ, ಸದಾನಂದ ಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಅವರ ವಕ್ತಾರನಲ್ಲ” ಎಂದು ತಿಳಿಸಿದರು.
ನನಗಾಗಿ ಶ್ರಮಿಸುವ ಕಾರ್ಯಕರ್ತರ ಚುನಾವಣೆಯಲ್ಲಿ ಮತ ಹಾಕುವುದು ನನ್ನ ಕರ್ತವ್ಯ:
ಅನೇಕ ಕೆಲಸಗಳ ಮಧ್ಯೆ ಕಾರ್ಯಕರ್ತರ ಚುನಾವಣೆಗೆ ಬಂದಿದ್ದೀರಿ ಎಂದು ಕೇಳಿದಾಗ, “ಕಾರ್ಯಕರ್ತರು ಎಂದರೆ ನಾವು. ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ಇದೇ ಚುನಾವಣೆಗೆ ನಾನು ಹಾಗೂ ಶ್ರೀಕಂಠಯ್ಯ ಅವರು ಚುನಾವಣೆಗೆ ಸ್ಪರ್ಧಿಸಿದ್ದೆವು. ಉಳಿದಂತೆ ಜನತಾದಳದಿಂದ ಸ್ಪರ್ಧಿಸಿದ್ದರು. ನನ್ನ ರಾಜಕೀಯ ಬದುಕಿನ ಮೊದಲ ಚುನಾವಣೆ ಅದಾಗಿತ್ತು. ಕನಕಪುರದಲ್ಲಿ ಈ ಚುನಾವಣೆ ಗೆದ್ದು ನಿರ್ದೇಶಕನಾಗಿ ಆಯ್ಕೆಯಾಗಿದ್ದೆ. ಆಗ ಆಸ್ಕರ್ ಫರ್ನಾಂಡೀಸ್ ಅವರು ಇದೇ ಕಟ್ಟಡದ ಕೋಣೆಯಲ್ಲಿ ಒಂದು ತಿಂಗಳು ಇದ್ದು, ಚುನಾವಣೆ ಮಾಡಿದ್ದರು. ಇದು ಕಾರ್ಯಕರ್ತರ ಚುನಾವಣೆ. ಕಾರ್ಯಕರ್ತರು ನನ್ನ ಚುನಾವಣೆ ಮಾಡುವಾಗ, ನಾನು ಅವರ ಚುನಾವಣೆಗೆ ಬಂದು ಮತ ಹಾಕದಿದ್ದರೆ ನನ್ನಿಂದ ಕರ್ತವ್ಯ ಲೋಪವಾಗುತ್ತದೆ. ಕಾರ್ಯಕರ್ತರು ಬಲಿಷ್ಠವಾಗಿದ್ದರೆ ಮಾತ್ರ ನಾವು ಬಲಿಷ್ಠವಾಗುತ್ತೇವೆ. ಚುನಾವಣೆಯಲ್ಲಿ ರಾಜಿ ಮಾಡಿಕೊಳ್ಳಿ ಎಂದು ಕೇಳಿದರು. ನಾವೇ ಚುನಾವಣೆ ಆಗಲಿ, ಕಾರ್ಯಕರ್ತರಿಗೆ ಚುನಾವಣೆ ಅನುಭವವಾಗಲಿ ಎಂದು ಹೇಳಿದ್ದೇವೆ. ನಾವು ಸಂಸತ್ ಚುನಾವಣೆ ವೇಳೆ ಯಾಮಾರಿದೆವು, ಎಷ್ಟೋ ಬೂತ್ ಗಳಿಗೆ ಏಜೆಂಟ್ ಗಳು ಇರಲಿಲ್ಲ. ಒಳೇಟು ಯಾವ ರೀತಿ ಬಿತ್ತು ಎಂದು ತಿಳಿಯಲಿಲ್ಲ. ನಾವು ನಮ್ಮ ತಪ್ಪನ್ನು ತಿದ್ದುಕೊಳ್ಳುತ್ತೇವೆ. ರಾಜಕಾರಣದಲ್ಲಿ ನಮ್ಮ ವೈರಿ ಯಾರು ಎಂದು ತಿಳಿಯಬೇಕು. ಈ ಚುನಾವಣೆಯಲ್ಲಿ ನಮ್ಮ ಪರ ಯಾರು ನಿಂತಿದ್ದಾರೆ, ವಿರುದ್ಧ ಯಾರು ನಿಂತಿದ್ದಾರೆ ಎಂದು ತಿಳಿಯುತ್ತದೆ. ಹೀಗಾಗಿ ಚುನಾವಣೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಪಕ್ಷ ಸಂಘಟನೆಗೆ ಇಂತಹ ಚುನಾವಣೆಗಳು ಮುಖ್ಯವೇ ಎಂದು ಕೇಳಿದಾಗ, “ಪಕ್ಷಕ್ಕೆ ಮೂಲ ಸ್ವರೂಪ ಇಲ್ಲವಾದರೆ ಯಾವ ಪಕ್ಷವೂ ಇರಲು ಸಾಧ್ಯವಿಲ್ಲ. ಇದು ನಮ್ಮ ಮೂಲ. ಸೊಸೈಟಿ, ಹಾಲಿನ ಒಕ್ಕೂಟ, ಪಿಎಲ್ ಡಿ, ಮುನ್ಸಿಪಾಲಿಟಿ, ಪಂಚಾಯ್ತಿಗಳು ನಮ್ಮ ಆಸ್ತಿಗಳಿದ್ದಂತೆ. ಇಲ್ಲಿರುವುದು 300 ಚಿಲ್ಲರೆ ಮತಗಳು, ಆದರೂ 300 ನಾಯಕರು ಕಾರ್ಯಕರ್ತರ ಗೆಲುವಿಗೆ ಬಂದಿದ್ದಾರೆ. ಹೀಗಾಗಿ ಎಷ್ಟೇ ಕೆಲಸದ ಒತ್ತಡ ಇದ್ದರೂ ಬಂದು ಮತ ಹಾಕುತ್ತಿದ್ದೇನೆ. ನಾವು ಬರಲಿಲ್ಲ ಅಂದರೆ, ನಾಯಕರೇ ಬಂದು ಮತ ಹಾಕಿಲ್ಲ, ನಾವು ಯಾಕೆ ಹಾಕಬೇಕು ಎಂದು ಹಳ್ಳಿಗಳಲ್ಲಿ ಮರ್ಯಾದೆ ತೆಗೆಯುತ್ತಾರೆ” ಎಂದರು.

