ಬೆಂಗಳೂರು: ಈಶಾನ್ಯ ಮಾನ್ಸೂನ್ ಚುರುಕು ಬೆನ್ನಲ್ಲೇ ರಾಜಧಾನಿಯ ಹಲವು ಬಡಾವಣೆಗಳಲ್ಲಿ ಶನಿವಾರ ಧಾರಾಕಾರ ಮಳೆಯಾಗಿತ್ತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ,ಅಲ್ಲಲ್ಲಿ ಮಳೆಯಾಗುತ್ತಿತ್ತು. ರಾತ್ರಿ ವೇಳೆ ಬಿರುಸಾಗಿ ಸುರಿದ ಪರಿಣಾಮ ವಾಹನ ಸವಾರರು ಪರದಾಡಿದರು.
ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕುಂಟಾಯಿತು. ವಿವಿಧ ರಸ್ತೆಗಳಲ್ಲಿ ಕಾಲುವೆಯಂತೆ ನೀರು ಹರಿಯಿತು. ನಗರದ ವಿವಿಧೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ರಸ್ತೆಯಲ್ಲಿಯೇ ಮಳೆನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ವಿಧಾನಸೌಧದ ಸುತ್ತಮುತ್ತ, ರಿಚ್ಮಂಡ್ ಟೌನ್, ಶಾಂತಿನಗರ, ಕಾರ್ಪೊರೇಷನ್ ವೃತ್ತ, ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ರಾಜಾಜಿನಗರ, ಬಸವೇಶ್ವರ ನಗರ ಮತ್ತು ನಂದಿನಿ ಲೇಔಟ್ ಸೇರಿ ಹಲವು ಬಡಾವಣೆಗಳಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ಜೋರು ಮಳೆ ಸುರಿಯಿತು.ಮನೆಗೆ ತೆರಳುತ್ತಿದ್ದವರು ಮಾರ್ಗ ಮಧ್ಯದಲ್ಲೇ ಸಿಲುಕಿ ಪರದಾಡಿದರು.
ಜ್ಞಾನಭಾರತಿ ಹತ್ತಿರ ನೀರು ನಿಂತಿರುವುದರಿಂದ ರಾಜರಾಜೇಶ್ವರಿ ನಗರದ ಕಡೆಗೆ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ತಾವರೆಕೆರೆಯಿಂದ ನಿಮ್ಹಾನ್ಸ್ ಆಸ್ಪತ್ರೆ ಕಡೆಗೆ ವಾಹನಗಳ ಸಂಚಾರಕ್ಕೆ ತಡೆಯುಂಟಾಯಿತು. ಹೆಬ್ಬಾಳ ಪೊಲೀಸ್ ಠಾಣೆಯಿಂದ ವಿಮಾನ ನಿಲ್ದಾಣದ ಕಡೆಗೆ, ಆರ್.ಪಿ. ರಸ್ತೆಯಿಂದ ಪಿ.ಜಿ. ಹಳ್ಳಿ ಕಡೆಗೆ, ವರ್ತೂರು ಕಡೆಯಿಂದ ಗುಂಜೂರು ಕಡೆಗೆ, ಭಾಷ್ಯಂ ವೃತ್ತದಿಂದ ಕಾವೇರಿ ಕಡೆಗೆ, ಉದಯ ಟಿ.ವಿ ಜಂಕ್ಷನ್ ಕಡೆಯಿಂದ ಜಯಮಹಲ್ ರಸ್ತೆ ಕಡೆಗೆ ವಾಹನಗಳು ನಿಧಾನವಾಗಿ ಸಾಗಿದವು.
ಮಳೆ ಪ್ರಮಾಣ:
* ಬಿಳೇಕಹಳ್ಳಿ- 29 ಮಿಮೀ
* ಸಿಂಗಸಂದ್ರ- 25 ಮಿಮೀ
* ವಿದ್ಯಾಪೀಠ – 23 ಮಿಮೀ
* ದೊಡ್ಡಬಿದರೆಕಲ್ಲು – 22 ಮಿಮೀ
* ಅರಕೆರೆ – 17 ಮಿಮೀ
* ಬೊಮ್ಮನಹಳ್ಳಿ- 15 ಮಿಮೀ

