ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಕೆಡಿ’ (KD – The Devil) ಚಿತ್ರದ ‘ಸರಸೇ ನಿನ್ನ ಸೆರಗ..’ ಹಾಡಿನ ಅಶ್ಲೀಲತೆ ಮತ್ತು ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಿರುವ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತೀವ್ರ ಕೆಂಗಣ್ಣು ಬೀರಿದ್ದಾರೆ. ಈ ವಿಷಯವಾಗಿ ಅವರು ಕೇವಲ ಅಸಮಾಧಾನ ವ್ಯಕ್ತಪಡಿಸುವುದಲ್ಲದೆ, ಈಗ ಅಧಿಕೃತ ಕ್ರಮಕ್ಕೆ ಮುಂದಾಗಿದ್ದಾರೆ.
ಹಾಡಿನಲ್ಲಿ ನಟಿ ನೋರಾ ಫತೇಹಿ ಅವರ ಉಡುಪು ಮತ್ತು ನೃತ್ಯದ ನಡೆಗಳು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ ಎಂದು ಆಕ್ಷೇಪಿಸಿರುವ ನಾಗಲಕ್ಷ್ಮಿ ಚೌಧರಿ, ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಮತ್ತು ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ (CBFC) ಅಧಿಕೃತವಾಗಿ ದೂರು ನೀಡಿದ್ದಾರೆ. ಈ ಹಾಡನ್ನು ಅನುಮೋದಿಸುವ ಮೊದಲು ಕೈಗೊಂಡ ಮಾನದಂಡಗಳೇನು ಎಂಬ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ.
ವರದಿ ಕೇಳಿದ ಮಹಿಳಾ ಆಯೋಗ:
“ಮನರಂಜನೆ ಎಂಬ ಹೆಸರಿನಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಹಾಡಿನ ದೃಶ್ಯಗಳು ಮತ್ತು ಸಾಹಿತ್ಯದ ಕುರಿತು ವಾಣಿಜ್ಯ ಮಂಡಳಿ ಮತ್ತು ಸೆನ್ಸಾರ್ ಮಂಡಳಿಯು ಕೂಡಲೇ ಪರಿಶೀಲನೆ ನಡೆಸಿ ನಮಗೆ ಸಮಗ್ರ ವರದಿ ನೀಡಬೇಕು,” ಎಂದು ಅವರು ಖಡಕ್ ಸೂಚನೆ ನೀಡಿದ್ದಾರೆ. ಚಿತ್ರದ ನಿರ್ದೇಶಕ ಪ್ರೇಮ್ ಮತ್ತು ತಂಡಕ್ಕೆ ಈ ಮೂಲಕ ಪರೋಕ್ಷ ಎಚ್ಚರಿಕೆ ರವಾನಿಸಲಾಗಿದೆ.
ಸಂಪ್ರದಾಯದ ಚೌಕಟ್ಟು ಮೀರಬಾರದು:
“ಸಿನಿಮಾ ಎಂಬುದು ಪ್ರಭಾವಶಾಲಿ ಮಾಧ್ಯಮ. ಯುವ ಪೀಳಿಗೆ ಇದನ್ನು ಅನುಸರಿಸುತ್ತದೆ. ಇಂತಹ ಅಶ್ಲೀಲತೆ ತುಂಬಿದ ಹಾಡುಗಳು ಸಾಂಸ್ಕೃತಿಕ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತವೆ. ಹೀಗಾಗಿ ಈ ಕೂಡಲೇ ಸಂಬಂಧಪಟ್ಟ ಮಂಡಳಿಗಳು ಕ್ರಮ ಕೈಗೊಳ್ಳಬೇಕು,” ಎಂದು ಅವರು ಆಗ್ರಹಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ‘ಕೆಡಿ’ ಚಿತ್ರತಂಡಕ್ಕೆ ಈಗ ಕಾನೂನಾತ್ಮಕ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

