Mon. Dec 23rd, 2024

ಮಹಿಳಾ‌ ದಿನಾಚರಣೆ‌: ಮೈಸೂರಿನ ‌ಹೆಮ್ಮೆಯ ಮಹಾರಾಣಿಯ ಸ್ಮರಣೆ

Share this with Friends

ಮೈಸೂರು, ಮಾ.7: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ.

ವಿಶ್ವ ಮಹಿಳೆಯರ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.

ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು 1911 ರ ಮಾರ್ಚ್ 19 ರಂದು ಆಚರಿಸಲಾರಂಭಿಸಿದರೂ ನಂತರ 1913 ರಲ್ಲಿ ಮಾರ್ಚ್ 8 ಕ್ಕೆ ಬದಲಾಯಿಸಲಾಯಿತು.

ವಿಶ್ವ ಮಹಿಳೆಯರ ದಿನವನ್ನು1975 ರಿಂದ ಯುನೈಟೆಡ್ ನೇಷನ್ಸ್ ಪ್ರಾಯೋಜಿಸುತ್ತಿದ್ದು,
ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಹಿಳೆಯರ ಸಮಸ್ಯೆಗಳು ಮತ್ತು ಹಕ್ಕುಗಳನ್ನು ಉತ್ತೇಜಿಸಲು ಈ ದಿನ ಒಂದು ಪ್ರಮುಖ ವೇದಿಕೆಯಾಗಲಿದೆ.

ಮಹಿಳಾ ದಿನವನ್ನು ಮಹಿಳಾ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಶಾಂತಿಗಾಗಿ ವಿಶ್ವಸಂಸ್ಥೆಯ ದಿನ ಎಂದೂ ಕರೆಯಲಾಗುತ್ತದೆ.

ಪ್ರತಿ ವರ್ಷ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒಂದು ಥೀಮ್ ನೀಡಲಾಗುತ್ತಿದ್ದು ಅದರ ಸುತ್ತ ಎಲ್ಲಾ ಆಚರಣೆಗಳನ್ನು ಯೋಜಿಸಲಾಗಿದೆ. ವಿಶ್ವಸಂಸ್ಥೆಯ ಈ ವರ್ಷದ ಥೀಮ್ ಮಹಿಳೆಯರಲ್ಲಿ ಹೂಡಿಕೆ-ಪ್ರಗತಿಯನ್ನು ವೇಗಗೊಳಿಸಿ ಎಂಬುದಾಗಿದೆ.

ಇದೆಲ್ಲಾ ಇಡೀ ವಿಶ್ವದ ಮಾತಾದರೆ ಇತ್ತ ಸಾಂಸ್ಕೃತಿಕ ನಗರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ನಾಡಿನ ಹೆಮ್ಮೆಯ ಮಹಾರಾಣಿ ಕೆಂಪನಂಜಮ್ಮಣ್ಣಿ – ವಾಣಿವಿಲಾಸ ಸನ್ನಿಧಾನ ಅವರ ದಿನಾಚರಣೆಯನ್ನಾಗಿ ಆಚರಿಸುವುದು ವಿಶೇಷ.

ಮೈಸೂರಿನ ಕೆಲ ಸಂಘಟನೆಗಳು ಕೆಂಪನಂಜಮ್ಮಣ್ಣಿ ಅವರ ಜನ್ಮದಿನಾಚರಣೆ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವುದು ಸ್ತುತ್ಯಾರ್ಹ.

ಮೈಸೂರು ಮಹಾರಾಜ ಹತ್ತನೇ ಚಾಮರಾಜ ಒಡೆಯರ್ ರವರ ಧರ್ಮಪತ್ನಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ಯವರು ಮೈಸೂರು ಇತಿಹಾಸದಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದ್ದಾರೆ.

ಚಿಕ್ಕವಯಸ್ಸಿನಲ್ಲಿ ನಾಲ್ವಡಿ ಅವರಿಗೆ ಅಧಿಕಾರವನ್ನು ವಹಿಸಿಕೊಟ್ಟು, ಅವರಿಗೆ ಮಾರ್ಗದರ್ಶನ ನೀಡುತ್ತಾ ಆಡಳಿತ ಚುಕ್ಕಾಣಿಯನ್ನು ಯಶಸ್ವಿಯಾಗಿ ನಡೆಸಿದ ಮಹಾರಾಣಿ ಅವರು.

ಹಾಗಾಗಿ ಭಾರತದ ಅತ್ಯಂತ ಪ್ರಸಿದ್ಧ ಆಡಳಿತಗಾರರಲ್ಲಿ ಶ್ಲಾಘನೀಯ ಆಡಳಿತಗಾರ್ತಿ ಎನಿಸಿಕೊಂಡವರು ಕೆಂಪನಂಜಮ್ಮಣ್ಣಿ ಯವರು.

ವಿಶ್ವವಿಖ್ಯಾತ ಕನ್ನಂಬಾಡಿ ಕಟ್ಟೆ(ಕೆ ಆರ್ ಎಸ್) ಕಟ್ಟುವಲ್ಲಿ ಮಹಾರಾಣಿಯವರು ಮಹತ್ತರ ಪಾತ್ರವಹಿಸಿದ್ದಾರೆ. ತಮ್ಮ ಎಲ್ಲಾ ಆಭರಣಗಳನ್ನು ಮಾರಿ ಈ ಪ್ರಸಿದ್ದ ಅಣೆಕಟ್ಟೆ ಕಟ್ಟಲು ನೆರವಾದ ಮಹಾನ್ ಸಹೃದಯಿ.

ಮಹಾರಾಣಿ ವಾಣಿವಿಲಾಸ ಸನ್ನಿಧಿಯವರು
ಚಿತ್ರದುರ್ಗ ಜಿಲ್ಲೆಯ 120 ವರ್ಷಗಳಷ್ಟು ಹಳೆಯದಾದ ವಾಣಿವಿಲಾಸ ಸಾಗರವು ಮಾರಿಕಣಿವೆ ನೀರಾವರಿ ಯೋಜನೆಯಡಿ ನಿರ್ಮಿಸಲ್ಪಟ್ಟಿದ್ದು ಇದರ ರೂವಾರಿಯಾಗಿದ್ದಾರೆ.

ಅಂತೆಯೇ, ಬೆಂಗಳೂರು ಹೆಸರಘಟ್ಟ ಜಲಾಶಯದಿಂದ ಪೈಪ್‌ಗಳ ಮೂಲಕ ಸಾಕಷ್ಟು ಕುಡಿಯುವ ನೀರನ್ನು ಪಡೆಯುವಂತಾಗಿದ್ದು ಮಹಾರಾಣಿಯವರ ಆಡಳಿತದಲ್ಲಿ ನಿರ್ಮಿಸಲಾಯಿತು.

1902 ರಲ್ಲಿ ಕೆ.ಜಿ.ಎಫ್ ಮತ್ತು ನಂತರ ಬೆಂಗಳೂರಿಗೆ ವಿದ್ಯುತ್ ಒದಗಿಸಿದ ಶಿವನಸಮುದ್ರ ಜಲವಿದ್ಯುತ್ ಯೋಜನೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅಲ್ಲದೆ ಮಹಾರಾಣಿಯವರು ಮಹಿಳೆಯರ ವಿದ್ಯಾಭ್ಯಾಸಕ್ಕೆ ಬಹಳಷ್ಟು ಪ್ರೋತ್ಸಾಹ ನೀಡಿದರು,ಅದಕ್ಕಾಗಿ ಮಹಾರಾಣಿ ಕಾಲೇಜು ಸೇರಿದಂತೆ ಅನೇಕ ಶಾಲಾ,ಕಾಲೇಜುಗಳನ್ನೂ ನಿರ್ಮಿಸಿ ಕೊಟ್ಯಂತರ ಮಹಿಳೆಯರು ಮುಂದೆ ಬರಲು ನೆರವಾಗಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ಇಂತಹಾ ಮಹಾನ್ ನಾಯಕಿ,ನಮ್ಮ‌ನಾಡಿನ ಹೆಮ್ಮೆಯ ಮಹಾರಾಣಿಯನ್ನು ನೆನೆಯಬೇಕಿದೆ.


Share this with Friends

Related Post