Sun. Mar 8th, 2026

ವಿಶ್ವ ಕ್ರಿಕೆಟ್‌ನ ‘ಮಹಾನ್ ಸಾಮ್ರಾಟ’ ಭಾರತ: ಕಿವೀಸ್‌ ಮಣಿಸಿ ಸತತ ಎರಡನೇ ಬಾರಿ ಟಿ-20 ವಿಶ್ವಕಪ್ ಗೆದ್ದ ಭಾರತ!

Share this with Friends

ಅಹಮದಾಬಾದ್: ತವರು ನೆಲದ ಅಭಿಮಾನಿಗಳ ಹರ್ಷೋದ್ಗಾರ, ಬೌಲರ್‌ಗಳ ಘಾತಕ ದಾಳಿ ಹಾಗೂ ಬ್ಯಾಟರ್‌ಗಳ ಅಬ್ಬರದ ನಡುವೆ ಭಾರತ ತಂಡವು ಇತಿಹಾಸ ನಿರ್ಮಿಸಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಭಾರತ, ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಅಬ್ಬರಿಸಿದ ಬ್ಯಾಟರ್‌ಗಳು:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ (89 ರನ್, 45 ಎಸೆತ) ಆಸರೆಯಾದರು. ಇಶಾನ್ ಕಿಶನ್ (54) ಹಾಗೂ ಯುವ ಆಟಗಾರ ಅಭಿಷೇಕ್ ಶರ್ಮಾ (52) ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದ ಗರಿಷ್ಠ ಮೊತ್ತವಾಗಿದೆ.

ಬೌಲರ್‌ಗಳ ಪಾರಮ್ಯ:

ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಆರಂಭದಲ್ಲೇ ಆಘಾತ ನೀಡಿದರು. ಬುಮ್ರಾ (4 ವಿಕೆಟ್) ಮತ್ತು ಸ್ಪಿನ್ ಮಾಂತ್ರಿಕ ಅಕ್ಷರ್ ಪಟೇಲ್ (3 ವಿಕೆಟ್) ದಾಳಿಗೆ ಸಿಲುಕಿದ ಕಿವೀಸ್ ಪಡೆ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಸರ್ವಪತನ ಕಂಡಿತು. ಆ ಮೂಲಕ ಭಾರತ 96 ರನ್‌ಗಳ ಐತಿಹಾಸಿಕ ಜಯ ದಾಖಲಿಸಿತು.

ವಿಶೇಷ ದಾಖಲೆ:

2024ರ ವಿಶ್ವಕಪ್ ವಿಜೇತ ಭಾರತ, ಇದೀಗ 2026ರಲ್ಲೂ ಟ್ರೋಫಿ ಗೆಲ್ಲುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗಣ್ಯರ ಶುಭಕೋರಿಕೆ:

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮಣಿಸಿ ಭಾರತ ವಿಶ್ವಕಪ್ ಮುಡಿಗೇರಿಸಿಕೊಳ್ಳುತ್ತಿದ್ದಂತೆ, ದೇಶಾದ್ಯಂತ ಸಂಭ್ರಮದ ಅಲೆ ಎದ್ದಿದೆ. ಈ ಐತಿಹಾಸಿಕ ಸಾಧನೆಯನ್ನು ರಾಷ್ಟ್ರ ಮತ್ತು ರಾಜ್ಯ ಮಟ್ಟದ ರಾಜಕೀಯ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ:

ವಿಶ್ವಕಪ್ ಗೆದ್ದ ಬೆನ್ನಲ್ಲೇ ಎಕ್ಸ್ (ಟ್ವಿಟರ್) ಮೂಲಕ ಅಭಿನಂದಿಸಿರುವ ಪ್ರಧಾನಿ ಮೋದಿ, “ಅಪ್ರತಿಮ ಕೌಶಲ್ಯ ಮತ್ತು ಅದ್ಭುತ ಶಕ್ತಿಯ ಪ್ರದರ್ಶನ! ಭಾರತ ತಂಡದ ಈ ಗೆಲುವು 140 ಕೋಟಿ ಭಾರತೀಯರಿಗೆ ಹೆಮ್ಮೆ ತಂದಿದೆ. ಸತತ ಎರಡನೇ ಬಾರಿ ವಿಶ್ವ ಚಾಂಪಿಯನ್ ಆಗುವ ಮೂಲಕ ನಮ್ಮ ಯುವ ಆಟಗಾರರು ಇತಿಹಾಸ ಬರೆದಿದ್ದಾರೆ. ಇಡೀ ದೇಶವೇ ನಿಮ್ಮನ್ನು ನೋಡಿ ಹೆಮ್ಮೆ ಪಡುತ್ತಿದೆ” ಎಂದು ಶ್ಲಾಘಿಸಿದ್ದಾರೆ.

ರಾಷ್ಟ್ರಪತಿಗಳ ಹಾರೈಕೆ:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂದೇಶ ನೀಡಿ, “ಟೀಮ್ ಇಂಡಿಯಾದ ಸಂಘಟಿತ ಹೋರಾಟ ಮತ್ತು ದೃಢ ಸಂಕಲ್ಪವು ಸ್ಫೂರ್ತಿದಾಯಕ. ಈ ವಿಜಯವು ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಮೈಲಿಗಲ್ಲಾಗಿದೆ” ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ: “ಅದ್ಭುತ ಆಟ! ಸತತ ಎರಡು ವಿಶ್ವಕಪ್ ಗೆಲ್ಲುವುದು ಅಸಾಮಾನ್ಯ ಸಾಧನೆ. ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೂ ನನ್ನ ಕಡೆಯಿಂದ ಬಿಗ್ ಸಲ್ಯೂಟ್” ಎಂದು ಶುಭ ಕೋರಿದ್ದಾರೆ.

ರಾಜ್ಯ ನಾಯಕರ ಹರ್ಷ:

ಮುಖ್ಯಮಂತ್ರಿ ಸಿದ್ದರಾಮಯ್ಯ: “ಮತ್ತೊಮ್ಮೆ ವಿಶ್ವದ ಭೂಪಟದಲ್ಲಿ ಭಾರತದ ಧ್ವಜ ಎತ್ತರಕ್ಕೆ ಹಾರಿದೆ. ಹರಿಣಗಳ ನಂತರ ಕಿವೀಸ್ ತಂಡವನ್ನು ಮಣಿಸಿ ವಿಶ್ವಕಪ್ ಗೆದ್ದ ನಮ್ಮ ತಂಡಕ್ಕೆ ಅಭಿನಂದನೆಗಳು. ಸಂಜು ಸ್ಯಾಮ್ಸನ್ ಮತ್ತು ಬುಮ್ರಾ ಅವರ ಪ್ರದರ್ಶನ ಅದ್ಭುತವಾಗಿತ್ತು” ಎಂದು ಕೊಂಡಾಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ: “ಭಾರತೀಯ ಕ್ರಿಕೆಟ್‌ನ ತಾಕತ್ತು ಏನು ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಗೆಲುವು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ಉಡುಗೊರೆ” ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಮತ್ತು ಸಂಸದರು,ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಮ್ ಇಂಡಿಯಾದ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡು ಅಭಿನಂದನೆಗಳ ಸುರಿಮಳೆಗರೆದಿದ್ದಾರೆ.


Share this with Friends

Related Post