Mon. Dec 23rd, 2024

ಪ್ರವಾಸೋದ್ಯಮ ದಿನ ಆಚರಣೆ:ಭರದ ಸಿದ್ಧತೆ-ಎಂ.ಕೆ.ಸವಿತಾ

Share this with Friends

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆ. 27ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಿಸುತ್ತಿದ್ದು ಭರದಿಂದ ಸಿದ್ಧತೆ ನಡೆದಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮೈಸೂರು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಕಾರ್ಯಕ್ರಮದಲ್ಲಿ ಸರ್ವಧರ್ಮದ ಜನರನ್ನು ಒಳಗೊಂಡ ಕಾರ್ಯಕ್ರಮ ಮತ್ತು ಮೆರವಣಿಗೆಗೆ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಉದ್ಘಾಟನೆಯ ನಂತರ ಅರಮನೆಯಿಂದ ಹೈವೆ ಸರ್ಕಲ್ ವರೆಗೆ ಮೆರವಣಿಗೆಯನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಗಜಪಡೆ, ಪೊಲೀಸ್ ಬ್ಯಾಂಡ್ ಹಾಗೂ ಜಾನಪದ ಕಲಾತಂಡಗಳ ಪ್ರದರ್ಶನ ಸೇರಿ ಪ್ರವಾಸಿಗರ ಗಮನ ಸೆಳೆಯುವಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ‌ಹೇಳಿದರು.

ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಾಂತಿಯ ಸಂಕೇತವಾದ ಬಿಳಿ ವಸ್ತ್ರವನ್ನು ಧರಿಸಬೇಕು ಎಂದು ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ .ಸಿ ಮಹದೇವಪ್ಪ ಅನಾವರಣಗೊಳಿಸಲಿದ್ದಾರೆ.

ಸೆ. 27 ರಂದು ನಡೆಯುವ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಚಿತ್ರಿಸಿ ಇನ್ಸ್ಟಾಗ್ರಾಮ್ ರೀಲ್ಸ್ ಆಗಿ ಅಪ್ಲೋಡ್ ಮಾಡಿ, ನಂತರ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ visit_mysuru ಅನ್ನು ಟ್ಯಾಗ್ ಮಾಡಬೇಕು. ಅದರಲ್ಲಿ ನಿಗದಿತ ಸಮಯದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಒಂದು ವಿಡಿಯೋ ಹಾಗೂ ಉತ್ತಮ ಕಂಟೆಂಟ್ ಇರುವ ಒಂದು ವಿಡಿಯೋಗೆ ಅಕ್ಟೋಬರ್ 5 ರಂದು ಅರಮನೆ ಮೈದಾನದಲ್ಲಿ ನಡೆಯುವ ದಸರಾ ವೇದಿಕೆಯಲ್ಲಿ ಬಹುಮಾನ ನೀಡಲಾಗುತ್ತದೆ ಎಂದು ‌ಸವಿತಾ ತಿಳಿಸಿದರು.

ಸಭೆಯಲ್ಲಿ ಅರಮನೆ ಮಂಡಳಿಯ ಉಪ ನಿರ್ದೇಶಕ ಸುಬ್ರಮಣ್ಯ, ದಸರಾ ವಸ್ತುಪ್ರದರ್ಶನ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೆ ಹರೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ ಡಿ ಸುದರ್ಶನ್, ಮೈಸೂರು ಟ್ರಾವಲ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಜಯಪ್ರಕಾಶ್‌ ರಾಜೇ ಅರಸ್‌ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post