Fri. Mar 6th, 2026

ಯತೀಂದ್ರ ಸಿದ್ದರಾಮಯ್ಯ ‘ವರ್ಗಾವಣೆ ಮಂತ್ರಿ’ಯಂತೆ ವರ್ತಿಸುತ್ತಿದ್ದಾರೆ: ಪ್ರತಾಪ್ ಸಿಂಹ

Share this with Friends

ಮೈಸೂರು:ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ‘ವರ್ಗಾವಣೆ ಮಂತ್ರಿ’ಯಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅತ್ಯಂತ ತೀಕ್ಷ್ಣವಾದ ಆರೋಪಗಳನ್ನು ಮಾಡಿದ್ದಾರೆ.  ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ‘ವರ್ಗಾವಣೆ ಮಂತ್ರಿ’ಯಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಯತೀಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದು, ವರ್ಗಾವಣೆಗಾಗಿ ಅಧಿಕಾರಿಗಳು ಅವರಿಗೆ “ಟ್ಯಾಕ್ಸ್” ಕಟ್ಟಬೇಕಾದ ಸ್ಥಿತಿ ಇದೆ ಎಂದು ಲೇವಡಿ ಮಾಡಿದರು.

“ಯತೀಂದ್ರ ಅವರು ಈ ವರ್ಗಾವಣೆ ದಂಧೆಯ ಮೂಲಕ ಯಾರಿಗಾಗಿ ಆಸ್ತಿ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ ಸಿಂಹ, ಮುಖ್ಯಮಂತ್ರಿಗಳು ತಮ್ಮ ಮಗನ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ಯತೀಂದ್ರ ಅವರ ನಡವಳಿಕೆಯಿಂದ ಮುಖ್ಯಮಂತ್ರಿಗಳಿಗೆ ಪ್ರತಿ ಹಂತದಲ್ಲೂ ಮುಜುಗರ ಉಂಟಾಗುತ್ತಿದೆ. “ರಾಕೇಶ್ ಸಿದ್ದರಾಮಯ್ಯ ಬದುಕಿದ್ದರೆ ಇಂದು ಸಿದ್ದರಾಮಯ್ಯ ಅವರಿಗೆ ಇಂತಹ ತಲೆತಗ್ಗಿಸುವ ಸ್ಥಿತಿ ಬರುತ್ತಿರಲಿಲ್ಲ” ಎಂದು ಹೇಳುವ ಮೂಲಕ ಭಾವನಾತ್ಮಕವಾಗಿ ಕಿಡಿಕಾರಿದ್ದಾರೆ

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು “ಪುಕ್ಕಲ ಮುಖ್ಯಮಂತ್ರಿ” ಎಂದು ಕರೆದಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ ಸಿಎಂ ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಯಕತ್ವ ಬದಲಾವಣೆಯ ವ್ಯಂಗ್ಯ: ಕಾಂಗ್ರೆಸ್ ಪಕ್ಷದ ಆಂತರಿಕ ನಾಯಕತ್ವ ಬದಲಾವಣೆ ಮತ್ತು ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನಡುವಿನ ಪೈಪೋಟಿಯ ಬಗ್ಗೆ ಮಾತನಾಡುತ್ತಾ, ಕಾಂಗ್ರೆಸ್ ಹೈಕಮಾಂಡ್‌ಗೆ ಯಾರು ಹೆಚ್ಚು ಹಣ ನೀಡುತ್ತಾರೆ ಎಂಬ ಸ್ಪರ್ಧೆ ಇವರ ನಡುವೆ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.

ಚಾಮರಾಜ ಕ್ಷೇತ್ರದಿಂದ ಸ್ಪರ್ಧೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪುನರುಚ್ಚರಿಸಿದ ಅವರು, ಈಗಾಗಲೇ ಕ್ಷೇತ್ರದಲ್ಲಿ ಸಂಘಟನೆ ಆರಂಭಿಸಿರುವುದಾಗಿ ತಿಳಿಸಿದರು.


Share this with Friends

Related Post