ಮೈಸೂರು,ಆ.2: ಯೋಗ, ವ್ಯಾಯಾಮದ ಮೂಲಕ ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಬಹುದು ಎಂದು ಶಾಸಕ ಹರೀಶ್ ಗೌಡ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಕುಕ್ಕರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಉಚಿತ ಯೋಗ ಮ್ಯಾಟ್ ವಿತರಣೆ ಮತ್ತು ಯೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ರೋಗಗಳಿಗೆ ಯೋಗ, ವ್ಯಾಯಾಮ ಮತ್ತು ಧ್ಯಾನ ಪ್ರಾಥಮಿಕ ಚಿಕಿತ್ಸೆ ಇದ್ದಂತೆ, ಯೋಗ ಮತ್ತು ಧ್ಯಾನ ವಿದ್ಯಾರ್ಥಿಗಳ ಪರಿಣಾಮಕಾರಿ ಕಲಿಕೆಗೆ ನೆರವಾಗುತ್ತದೆ, ಜ್ಞಾಪಕ ಶಕ್ತಿಗೂ ಅತ್ಯವಶ್ಯ ಎಂದು ತಿಳಿಸಿದರು.
ಪ್ರತಿನಿತ್ಯ ದೇಹ ದಂಡನೆ ಮಾಡಬೇಕು, ಮಕ್ಕಳು ಏಕಾಗ್ರತೆ ಸಾಧಿಸಲು ಹಲವಾರು ತಂತ್ರಗಳಿವೆ. ಅವುಗಳನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಶಾಸಕ ಹರೀಶ್ ಸಲಹೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ. ನಟರಾಜ್ ಜೋಯಿಸ್ ಮಾತನಾಡಿ,ಓದಿನಲ್ಲಿ ಸಾಧನೆ ಮಾಡಬೇಕಾದರೆ ಮನಸ್ಸಿನ ಏಕಾಗ್ರತೆ ಬಹಳ ಮುಖ್ಯ, ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಆಧುನಿಕ ಜೀವನ ಶೈಲಿಯಿಂದ ಏನೇನೊ ರೋಗಗಳು ಬರುತ್ತಿದ್ದು, ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಯೋಗವನ್ನು ಪ್ರತಿನಿತ್ಯ ಊಟ ನಿದ್ರೆಯಂತೆ ದಿನಚರಿ ಮಾಡಿಕೊಳ್ಳಿ ಎಂದು ತಿಳಿಹೇಳಿದರು.
ಇದೇ ವೇಳೆ ಹಿರಿಯ ಯೋಗ ಸಾಧಕರಾದ ರಾಘವೇಂದ್ರ ಪೈ ಅವರು ಮಕ್ಕಳಿಗೆ
ಯೋಗದ ಮಹತ್ವ ಹಾಗೂ ಕೆಲವು ಯೋಗ ಆಸನಗಳನ್ನು ಹೇಳಿಕೊಟ್ಟರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜೈ ಭೀಮ್ ಜನಸ್ಪಂದನಾ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು, ಅಜಯ್ ಶಾಸ್ತ್ರಿ, ನವೀನ್, ರವಿಚಂದ್ರ, ಬೈರತಿ ಲಿಂಗರಾಜು, ಹಿರಿಯ ಪ್ರೌಡ ಶಾಲೆಯ ಮುಖ್ಯೋಪಾಧ್ಯಯರಾದ ಚಂದ್ರು,
ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ವಿಕ್ಟೋರಿಯಾ,ಶಾಲೆಯ ಶಿಕ್ಷಕರಾದ
ಪಾರ್ವತಿ ದಿವ್ಯ, ಪ್ರಿಯದರ್ಶಿನಿ,ರಾಕೇಶ್, ಸದಾಶಿವ್ ಮತ್ತಿತರರು ಹಾಜರಿದ್ದರು.