Thu. Dec 26th, 2024

ಶಿಸ್ತು ಬದ್ಧ ಜೀವನಕ್ಕೆ ಯೋಗ ಪ್ರೇರಣೆ: ಡಾ ಹೆಚ್.ಸಿ. ಮಹದೇವಪ್ಪ

Share this with Friends

ಮೈಸೂರು.ಜೂ. 21: ಶಿಸ್ತು ಬದ್ಧ ಜೀವನ ನಡೆಸಲು ಯೋಗ ಅತ್ಯಂತ ಪ್ರೇರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಭಾರತ ದೇಶವು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರಿ ಯೋಗವನ್ನು ಅಂತರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡಲು ಘೋಷಣೆ ಮಾಡಿ ಇಂದಿಗೆ ಹತ್ತು ವರ್ಷವಾಗಿದೆ. ಶಿಸ್ತು ಬದ್ಧ ಜೀವನಕ್ಕೆ ಯೋಗ ಸಹಕಾರಿ ಎಂದು ಸಚಿವರು ಹೇಳಿದರು.

ನಗರದ ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್‌ ಇಲಾಖೆ ವತಿಯಿಂದ
ನಡೆದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಗದ ನಿಯಮಗಳನ್ನು ಪಾಲಿಸುವಲ್ಲಿ ಭಾರತ ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ಯೋಗ ಮಾಡುವುದರಿಂದ ನಮ್ಮ ದೇಹದ ನಿಯಂತ್ರಣ, ಅಂಗಾಂಗಗಳ ಪರಿಪೂರ್ಣ ಮತ್ತು ಕ್ರಮಬದ್ಧವಾದ ಕಾರ್ಯ ಚಟುವಟಿಕೆ, ಮನಸ್ಸಿನ ಸಮತೋಲನ ಆರೋಗ್ಯದ ವೃದ್ಧಿ, ಶಿಸ್ತು ಬದ್ಧವಾದ ಜೀವನ ನಡೆಸಲು ಪ್ರೇರಣೆಯಾಗಿದೆ ಎಂದು ಹೇಳಿದರು.

ಕಳೆದು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ರೈಸ್ ಕೋರ್ಸ್ ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮಾಡಿ ವಿಶ್ವ ಗಿನ್ನಿಸ್ ದಾಖಲೆಯನ್ನು ಮೈಸೂರು ಮಾಡಿತ್ತು ಎಂದು ಸ್ಮರಿಸಿದರು.

ಸಂಸದ ಯದುವೀ‌ರ್ ಕೃಷ್ಣದತ್ತ ಚಾಮರಾಜ ಒಡೆಯ‌ರ್ ಅವರು ಮಾತನಾಡಿ, ಮೈಸೂರಿನಲ್ಲಿ ಯೋಗ ದಿನಾಚರಣೆಯನ್ನು ಪ್ರತಿ ವರ್ಷವೂ ಬಹಳ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಭಾರತದಲ್ಲಿ ಆಧುನಿಕ ಕಾಲದ ಯೋಗ ಮೈಸೂರಿನಿಂದ ಸೃಷ್ಟಿಯಾಗಿದೆ ಎಂದರೆ ತಪ್ಪಿಲ್ಲ. ಅಂದಿನ ಕಾಲದ ಶ್ರೀತತ್ವ ನಿಧಿಯಲ್ಲಿ 108 ಆಸನಗಳನ್ನು ದಾಖಲೆ ಮಾಡಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯೋಗ ಅಭ್ಯಾಸ ಮೈಸೂರಿನಲ್ಲಿ ಶುರುವಾಗಿತ್ತು ಎಂದು ಹೇಳಿದರು.

ಹಿಂದಿನ ಪರಂಪರೆಯ ರಾಯಭಾರಿಯಾಗಿ ಇಂದು ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ,ದಸರಾ ಸಂದರ್ಭದಲ್ಲಿ ಯೋಗ ದಿನವನ್ನು ಗಿನ್ನಿಸ್ ದಾಖಲೆಗೆ ಮಾಡಲು ಸಿದ್ಧವಾಗಬೇಕು ಇದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು.

ಶಾಸಕರಾದ ಟಿ.ಎಸ್‌.ಶ್ರೀವತ್ಸ ಅವರು ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮೊಂದಿಗೆ ಯೋಗ ಮಾಡಿದ್ದು ನೆನಪಿಗೆ ಬರುತ್ತದೆ. ಯೋಗ ಎಂದರೆ ಮೈಸೂರು ಎಂದರೆ ಯೋಗ. ಅನೇಕ ಪ್ರಥಮಗಳಿಗೆ ಮೈಸೂರು, ಮಹಾರಾಜರು
ಮೈಸೂರು ಅರಮನೆ,ಕಾರಣವಾಗಿದೆ. ಇದನ್ನು ಇಂದು ನೆನೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ,ದಸರಾ ಸಂದರ್ಭದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಮತ್ತೊಮ್ಮೆ ಮೈಸೂರಿನಲ್ಲಿ ಯೋಗಾ ಗಿನ್ನಿಸ್ ದಾಖಲೆ ನಿರ್ಮಿಸಲು ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತದೆ. ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ಮಾಡಿ ಯೋಗ ದಸರವನ್ನು ಆಚರಣೆ ಮಾಡಿ ಯೋಗದ ಮಹತ್ವವನ್ನು ಎಲ್ಲೆಡೆ ಸಾರೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ,ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post