Thu. Mar 12th, 2026

ಬಮೂಲ್‌ನಿಂದ ಹೈನುಗಾರರಿಗೆ ‘ಯುಗಾದಿ ಉಡುಗೊರೆ’: 1.27 ಲಕ್ಷ ರೈತರ ಖಾತೆಗೆ ₹59 ಕೋಟಿ ಪ್ರೋತ್ಸಾಹಧನ ಜಮೆ

Share this with Friends

ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ತನ್ನ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಭರ್ಜರಿ ಕೊಡುಗೆ ನೀಡಿದೆ. ಒಕ್ಕೂಟದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರೈತರಿಗೆ ನೇರವಾಗಿ ಒಕ್ಕೂಟದ ಲಾಭದ ಪಾಲನ್ನು ಹಂಚಲಾಗುತ್ತಿದ್ದು, ಪ್ರತಿ ಕೆಜಿ ಹಾಲಿಗೆ ಸರಾಸರಿ 1 ರೂಪಾಯಿಯಂತೆ ಒಟ್ಟು 59.39 ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರೋತ್ಸಾಹಧನದ ಸೌಲಭ್ಯವು ಏಪ್ರಿಲ್ 1, 2025 ರಿಂದ ಮಾರ್ಚ್ 31, 2026 ರವರೆಗೆ ಒಕ್ಕೂಟಕ್ಕೆ ಹಾಲು ಪೂರೈಸಿದ ಸುಮಾರು 1,27,644 ರೈತರಿಗೆ ದೊರೆಯಲಿದೆ. ಮಾರ್ಚ್ 31ರ ಒಳಗಾಗಿ ಅಥವಾ ಏಪ್ರಿಲ್ 10ರ ಒಳಗೆ ಎಲ್ಲಾ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಈ ಪ್ರೋತ್ಸಾಹಧನದ ಮೊತ್ತವನ್ನು ನೇರವಾಗಿ ಜಮೆ ಮಾಡಲಾಗುವುದು.

ನಾವು ರೈತರಿಂದ ಲೀಟರ್ ಲೆಕ್ಕದಲ್ಲಿ ಹಾಲನ್ನು ಖರೀದಿ ಮಾಡುತ್ತೇವೆಯಾದರೂ ಲಾಭಾಂಶ ಹಂಚಿಕೆಯ ಲೆಕ್ಕ ಕೆಜಿ ಲೆಕ್ಕದಲ್ಲಿ ಹಾಕಲಾಗುತ್ತದೆ ಹಾಗಾಗಿ ನಮ್ಮ ಲಾಭದಲ್ಲಿ ಪ್ರತಿ ಕೆಜೆಗೆ 1 ರೂ. ನಂತೆ ಹಾಲು ಉತ್ಪಾದಕರಿಗೆ ನೀಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಷ್ಟದಿಂದ ಲಾಭದತ್ತ ಪಯಣ: “ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಒಕ್ಕೂಟವು ಸುಮಾರು ₹45 ಕೋಟಿ ನಷ್ಟದಲ್ಲಿತ್ತು. ಆಡಳಿತಾತ್ಮಕ ಸುಧಾರಣೆ, ಮಾರುಕಟ್ಟೆ ಸೋರಿಕೆ ತಡೆ ಹಾಗೂ ಸಾಗಾಣಿಕಾ ವೆಚ್ಚ ಕಡಿತಗೊಳಿಸುವ ಮೂಲಕ ಈಗ ಮಾಸಿಕ ₹20 ಕೋಟಿ ಲಾಭ ಗಳಿಸುತ್ತಿದ್ದೇವೆ,” ಎಂದು ಸುರೇಶ್ ಮಾಹಿತಿ ನೀಡಿದರು.

ವೆಚ್ಚ ಕಡಿತದ ಮಂತ್ರ: ಸ್ಟೀಮ್ ಉತ್ಪಾದನೆಗೆ ಬಳಸುತ್ತಿದ್ದ ಫರ್ನೇಸ್ ಆಯಿಲ್ ಬದಲಿಗೆ ಸ್ಥಳೀಯ ಒಣ ಸೌದೆ ಬಳಸುವ ಮೂಲಕ ಪ್ರತಿ ಲೀಟರ್ ವೆಚ್ಚವನ್ನು ₹7 ರಿಂದ ₹3 ಕ್ಕೆ ಇಳಿಸಲಾಗಿದೆ. ಇದು ಒಕ್ಕೂಟದ ಲಾಭ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಮಾರುಕಟ್ಟೆ ವಿಸ್ತರಣೆ: ಮದರ್ ಡೈರಿ ದೆಹಲಿಗೆ ನಿತ್ಯ 2 ಲಕ್ಷ ಲೀಟರ್ ಹಾಗೂ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ 1.5 ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಸಂಸ್ಕರಿಸಿ ನೀಡಲಾಗುತ್ತಿದೆ. ಕನಕಪುರ ಮೆಗಾ ಡೈರಿಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಉತ್ಪನ್ನಗಳ ವೈವಿಧ್ಯತೆ: ತುಪ್ಪದ ಮಾರಾಟದಿಂದ ಹೆಚ್ಚಿನ ಲಾಭ ಬರುತ್ತಿದ್ದು, ಪನ್ನೀರ್, ಚೀಸ್ ಹಾಗೂ ವೇ ಪೌಡರ್ (Whey Powder) ಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ. ಈ ಹಿಂದೆ ವ್ಯರ್ಥವಾಗುತ್ತಿದ್ದ ವೇ ನೀರನ್ನು ಈಗ ಪೌಡರ್ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದರು.

ರೈತರ ಹಿತರಕ್ಷಣೆಯೇ ಗುರಿ:

“ಹೊರ ರಾಜ್ಯಗಳ ಸ್ಪರ್ಧೆಯಿದ್ದರೂ ನಮ್ಮ ರೈತರ ಹಾಲಿನ ದರ ಕಡಿಮೆ ಮಾಡುವುದು ನನಗೆ ಇಷ್ಟವಿಲ್ಲ. ರೈತರ ಆರ್ಥಿಕ ಮಟ್ಟ ಸುಧಾರಿಸುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಯುಗಾದಿ ಹಬ್ಬದ ಸಂಭ್ರಮದಲ್ಲಿ ಈ ಪ್ರೋತ್ಸಾಹಧನವು ಅವರಿಗೆ ಆನೆಯ ಬಲ ನೀಡಲಿದೆ,” ಎಂದು ಡಿ.ಕೆ. ಸುರೇಶ್ ತಿಳಿಸಿದರು.

ಕೆಎಂಎಫ್ ಅಧ್ಯಕ್ಷ ಸ್ಥಾನ: ಕೆಎಂಎಫ್ ಅಧ್ಯಕ್ಷ ಸ್ಥಾನದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, “ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಅಂತಹ ಯಾವುದೇ ಲಾಬಿಯನ್ನು ನಾನು ಮಾಡುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಮತ್ತು ಶಾಸಕರ ಸೂಚನೆಯ ಮೇರೆಗೆ ಮಾತ್ರ ತಾವು ಬಮೂಲ್ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

 


Share this with Friends

Related Post