Mon. Dec 23rd, 2024

ಹೊಸಪೇಟೆಯಲ್ಲಿ ಗ್ರ್ಯಾಂಡ್ “ಯುವ” ಚಿತ್ರದ ಪ್ರೀರಿಲೀಸ್ ಇವೆಂಟ್

Yuva
Share this with Friends

ಬಿಡುಗಡೆಗೆ ಸಜ್ಜಾಗಿರುವಂತಹ ಚಿತ್ರ “ಯುವ”. ಹೊಸಪೇಟೆಯ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಮೈದಾನದಲ್ಲಿ ಯುವರಾಜ್ ಕುಮಾರ್ ನಾಯಕನಾಗಿ ಬೆಳ್ಳಿ ಪರದೆ ಮೇಲೆ ರಾರಾಜಿಸಲ್ಲಿರುವ “ಯುವ” ಚಿತ್ರದ ಪ್ರೀ- ರಿಲೀಸ್ ಇವೆಂಟ್ ಕಾರ್ಯಕ್ರಮ ವರ್ಣಮಯವಾಗಿ ನೃತ್ಯ ಪ್ರದರ್ಶನದ ಮೂಲಕ ಆರಂಭಗೊಂಡಿತು. ಇಡೀ ವೇದಿಕೆಯ ಮುಂಭಾಗದಲ್ಲಿ ಅಪ್ಪು ಅಭಿಮಾನಿಗಳು ಅಪ್ಪು.. ಅಪ್ಪು… ಎಂಬ ಕೂಗು ಅಲ್ಲಿದ್ದ ಎಲ್ಲಾ ಸಿನಿಮಾ ತಂಡದವರು ಹಾಗೂ ಬಂದಿದ್ದ ಜನರ ಗಮನ ಸೆಳೆದಿತ್ತು.

ಇನ್ನು ಈ ಒಂದು ಕಾರ್ಯಕ್ರಮದಲ್ಲಿ ನಟಿಯರಾದ ಭಾವನ ರಾವ್ , ನಿಷ್ವಿಕಾ ನಾಯ್ಡು ಡ್ಯಾನ್ಸ್ ಅಬ್ಬರದ ನಡುವೆ ಹಲವಾರು ಯುವ ಪ್ರತಿಭೆಗಳ ನೃತ್ಯ ಕೂಡ ಕಣ್ಮನ ಸೆಳೆಯಿತು. ಇನ್ನು ನವೀನ್ ಸಜ್ಜು ಹಾಡಿದ ಅಪ್ಪು ಅಜರಾಮರ ಹಾಡು ಎಲ್ಲರ ಮನಸು ಕಂಬನಿ ಮಿಡಿಯುವಂತೆ ಮಾಡಿತು. ಅದೇ ರೀತಿ ಗಾಯಕ ವಿಜಯಪ್ರಸಾದ್ ಹಾಡುಗಳು ಕೂಡ ಅಭಿಮಾನಿಗಳ ಸಂತೋಷವನ್ನು ಹಿಮ್ಮಡಿಗೊಳಿಸಿತು.

ಇನ್ನು ಈ ಒಂದು ಕಾರ್ಯಕ್ರಮಕ್ಕೆ ಚಿತ್ರದಲ್ಲಿ ನಾಯಕನ ತಾಯಿಯಾಗಿ ಅಭಿನಯಿಸಿರುವಂತಹ ನಟಿ ಸುಧಾರಣೆ, ತಂದೆಯ ಪಾತ್ರಧಾರಿ ಅಚ್ಚುತ್ ಕುಮಾರ್ , ಅಕ್ಕನ ಪಾತ್ರ ಮಾಡಿರುವ ಹಿತ ಚಂದ್ರಶೇಖರ್ ಸೇರಿದಂತೆ ಬಿ. ಎಂ ಗಿರಿರಾಜ್ , ರಾಘು ಶಿವಮೊಗ್ಗ ಹಾಗೂ ಚಿತ್ರದ ತಂತ್ರಜ್ಞರು ಕೂಡ ಚಿತ್ರದ ಕುರಿತು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇನ್ನು ಈ ಚಿತ್ರದ ನಟಿ ಸಪ್ತಮಿ ಗೌಡ ಬಂದಿರಲಿಲ್ಲ. ಇನ್ನು ನಾಯಕ ಯುವ ರಾಜಕುಮಾರ್ ತಂದೆ ರಾಘವೇಂದ್ರ ರಾಜಕುಮಾರ್ , ತಾಯಿ ಮಂಗಳ ಹಾಗೂ ಅಣ್ಣ ವಿನಯ್ ರಾಜಕುಮಾರ್ ಕೂಡ ತಮ್ಮನ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು.

ವೇದಿಕೆ ಮುಂಭಾಗ ರಾಘವೇಂದ್ರ ರಾಜಕುಮಾರ್ ಮಾತನಾಡುತ್ತಾ ಈ ಚಿತ್ರ ಆರಂಭಕ್ಕೆ ಕಾರಣವೇ ನನ್ನ ತಮ್ಮ ಅಪ್ಪು , ಅವನು ಸದಾ ನಮ್ಮೊಂದಿಗೆ ಇದ್ದಾನೆ. ನನ್ನ ಮಗ ಯುವ ರಾಜ್‍ಕುಮಾರ್ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಆಸೆ ಅಪ್ಪುಗೆ ಹೆಚ್ಚಾಗಿತ್ತು. ಇವನು ನನ್ನ ಮಗನಲ್ಲ ನನ್ನ ತಮ್ಮ ಪುನೀತ್ ರಾಜಕುಮಾರ್ ಮಗ ಅವನ ಆಶೀರ್ವಾದ ಸದಾ ಇವನ ಮೇಲೆ ಇರಲಿ. ಯುವ ನನ್ನ ಮುಂದೆ ಕೈಹಿಡಿದು ನಡೆಸಿಕೊಂಡು ಹೋಗುತ್ತಿರುವುದು ಅಶ್ವಿನಿ ಪುನೀತ್ ರಾಜಕುಮಾರ್.

ಹಾಗೆಯೇ ನನ್ನ ತಮ್ಮ ಪುನೀತ್ ನ ಗುಣ ನನ್ನ ಮಗ ಬೆಳೆಸಿಕೊಳ್ಳಲಿ ಸದಾ ಪ್ರೀತಿ-ವಿಶ್ವಾಸ ಸ್ನೇಹದಿಂದ ಮುಂದೆ ಸಾಗಲಿ , ಅವನನ್ನ ಮುನ್ನಡೆಸುವ ಜವಾಬ್ದಾರಿ ನಿಮ್ಮದು ಎಂದು ಕೇಳಿಕೊಂಡರು. ಅದೇ ರೀತಿ ಅಣ್ಣ ವಿನಯ್ ರಾಜಕುಮಾರ್ ಕೂಡ ತಮ್ಮನ ಜವಾಬ್ದಾರಿ , ಆಸಕ್ತಿಯನ್ನು ಗುರುತಿಸಿ ಈ ಚಿತ್ರ ಸಿಕ್ಕಿದೆ. ಅವನಿಗೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು.

ಈ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತನಾಡುತ್ತ ಹೊಸಪೇಟೆ ಅಂದರೆ ಒಂದು ವೈಬ್ರೇಶನ್ , ಇದು ಅಪ್ಪು ಅಣ್ಣನ ಮೆಚ್ಚಿನ ಸ್ಥಳ. ಇಲ್ಲಿನ ಜನರು ಪ್ರೀತಿ, ವಿಶ್ವಾಸ ಆಮೇಲೆ ಹೊಸಪೇಟೆಯ ಬಿರಿಯಾನಿ ಅಪ್ಪು ಸರ್ ಗೆ ಬಹಳ ಇಷ್ಟ.
ನಾವು ಈ ಕಾರ್ಯಕ್ರಮ ಇಲ್ಲಿಂದಲೇ ಸದ್ದು ಮಾಡಲು ಕಾರಣ ಅಪ್ಪು ಫ್ಯಾನ್ಸ್ ನ ಮಹಾಸಾಗರವೇ ಇಲ್ಲಿದೆ.

ಹೊಸಪೇಟೆಯಲ್ಲಿ ಮುಂದೆ ಅಪ್ಪು ನಗರವೇ ಆಗಬಹುದು , ನಿಮ್ಮ ಅಭಿಮಾನ ಪ್ರೀತಿಗೆ ನಾವು ಸದಾ ಚಿರಋಣಿ , ನಮ್ಮ ಯುವರಾಜ್ ಕುಮಾರ್ ಬಹಳ ಶ್ರಮವಹಿಸಿ ಯುವ ಚಿತ್ರದಲ್ಲಿ ನಿಮ್ಮನ್ನು ರಂಜಿಸಲು ಬರ್ತಿದ್ದಾರೆ, ಫ್ಯಾನ್ ಮೂವ್ಮೆಂಟ್ ಡೈಲಾಗ್ , ಅಪ್ಪು ಛಾಯೆ ಈ ಚಿತ್ರದಲ್ಲಿ ಕಾಣುತ್ತದೆ. ನಿಮ್ಮ ಕೂಗಾಟವೇ ನಮಗೊಂದು ಶಕ್ತಿ ಬರುತ್ತೆ. ಹಾಗೆ ಈ ಚಿತ್ರದಲ್ಲಿ ಅಪ್ಪ-ಮಗನ ಸಂಬಂಧ , ಮಾನವೀಯತೆಯ ಮೌಲ್ಯ , ವಿದ್ಯಾರ್ಥಿಗಳ ಭವಿಷ್ಯ ಸೇರಿದಂತೆ ಒಂದಷ್ಟು ವಿಚಾರಗಳು ನಿಮ್ಮನ್ನ ಖಂಡಿತ ಸೆಳೆಯುತ್ತದೆ ಎನ್ನುತ ಚಿತ್ರದ ಕಲಾವಿದರು , ನಿರ್ದೇಶಕರ ತಂಡ ಹಾಗೂ ತಂತ್ರಜ್ಞಾನ ಬಗ್ಗೆ ಮಾತನಾಡಿ ಈ ಚಿತ್ರ ನೀವೆಲ್ಲರೂ ಇಷ್ಟಪಡ್ತೀರಾ ನಿಮ್ಮ ಸಪೋರ್ಟ್ ಇಡೀ ನಮ್ಮ ತಂಡದ ಮೇಲೆ ಇರಲಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದ ಕೇಂದ್ರ ಬಿಂದು ಅಶ್ವಿನಿ ಪುನೀತ್ ರಾಜಕುಮಾರ್ ಮಾತನಾಡುತ್ತಾ ಹೊಸಪೇಟೆಯ ಜನ ಹೇಗಿದ್ದೀರಾ? ಎನ್ನುತ್ತಾ ಯುವ ಬರ್ದಿದ್ದಾನೆ ಅವನನ್ನ ಹರಿಸಿ , ಬೆಳೆಸಿ ಎಂದು ಕೇಳಿಕೊಂಡರು.ಇನ್ನು ಯುವರಾಜ್ ಕುಮಾರ್ ಮಾತನಾಡುತ್ತಾ ನಾನು ಇವತ್ತು ನಿಮ್ಮ ಮುಂದೆ ನಿಂತಿರುವುದಕ್ಕೆ ಕಾರಣನೇ ನನ್ನ ಚಿಕ್ಕಪ್ಪ. ಈ ಸಿನಿಮಾ ಆರಂಭವಾಗಿ ಇಷ್ಟು ಯಶಸ್ವಿಯಾಗಿ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಬೆಂಬಲವಾಗಿ ಸದಾ ನಾನು ಇದ್ದೀನಿ ಎಂದು ಧೈರ್ಯ ತುಂಬಿರುವುದೇ ನಮ್ಮ ಆಂಟಿ ಅಶ್ವಿನಿ ಪುನೀತ್ ರಾಜಕುಮಾರ್.

ನಾನು ಸದಾ ಎಂದಿಗೂ ಮರೆಯುವುದಿಲ್ಲ , ನನ್ನ ಇಡೀ ಕುಟುಂಬ , ನನ್ನ ಚಿಕ್ಕಪ್ಪನ ಅಭಿಮಾನಿಗಳು ನೀವು ಹಾಗೂ ನನ್ನೆಲ್ಲ ಫ್ಯಾನ್ಸ್ ಗಳ ಸಹಕಾರ ನನಗೆ ಸಿಕ್ಕಿದೆ. ಈ ಒಂದು ಚಿತ್ರ ಇಷ್ಟು ಅಚ್ಚುಕಟ್ಟಾಗಿ ಬರಲು ಕಾರಣ ನನ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ನನಗೆ ಬಹಳಷ್ಟು ಹೇಳಿಕೊಟ್ಟಿದ್ದಾರೆ. ನಾನು ತುಂಬಾ ಕಲಿತಿದ್ದೇನೆ ಹಾಗೂ ಇಂತಹ ಒಂದು ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರನ್ನು ಎಂದಿಗೂ ಮರೆಯುವುದಿಲ್ಲ.

ಹಾಗೆಯೇ ಈ ಚಿತ್ರದಲ್ಲಿ ಇರುವ ಹಿರಿಯ ಕಲಾವಿದರು ಬಹಳಷ್ಟು ತಿದ್ದಿ ಹೇಳಿಕೊಟ್ಟಿದ್ದಾರೆ. ಹಾಗೆಯೇ ಗೆಳೆಯರೊಟ್ಟಿಗೆ ಅಭಿನಯಿಸಿದ್ದು ಬಹಳ ಖುಷಿ ಇದೆ. ಇನ್ನು ಆಕ್ಷನ್ ಹಾಗೂ ಸಾಂಗ್ ಗೆ ಬಹಳಷ್ಟು ಶ್ರಮ ಪಟ್ಟಿದ್ದೇನೆ. ನನ್ನ ತಾತ , ದೊಡ್ಡಪ್ಪ , ಅಪ್ಪ , ಚಿಕ್ಕಪ್ಪ ಅಭಿನಯವನ್ನು ನೋಡಿ ಒಂದಷ್ಟು ಕಲಿತಿದ್ದು ನನಗೆ ಸಹಾಯವಾಗಿದೆ. ಈ ಚಿತ್ರ ಖಂಡಿತ ನಿಮ್ಮೆಲ್ಲರಿಗೂ ಇಷ್ಟ ಆಗುತ್ತೆ. ಇಡೀ ತಾಂತ್ರಿಕ ತಂಡ ನಮ್ಮ ಚಿತ್ರ ಅದ್ಭುತವಾಗಿ ಬರಲು ಕಾರಣವಾಗಿದ್ದಾರೆ. ಇದೇ 29ರಂದು ನಮ್ಮ ಯುವ ನಿಮ್ಮ ಮುಂದೆ ಬರ್ತಿದೆ ನಮ್ಮನ್ನು ಹರಸಿ ಬೆಳೆಸಿ ಎಂದು ಕೇಳಿಕೊಂಡರು. ಒಟ್ಟಾರೆ ಅದ್ದೂರಿಯಾಗಿ ನಡೆದ ಈ ಒಂದು ಪ್ರೀ -ರಿಲೀಸ್ ಇವೆಂಟ್ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿತ್ತು. ಇನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Share this with Friends

Related Post