Thu. Dec 26th, 2024

ಒಂದು ವರ್ಷದಲ್ಲಿ ಶೂನ್ಯ ಸಾಧನೆ:ಸಿಎಂ ರಾಜೀನಾಮೆಗೆ‌ ಅಶೋಕ್ ಆಗ್ರಹ

Share this with Friends

ಬೆಂಗಳೂರು, ಮೇ. 20: ಕಾಂಗ್ರೆಸ್‌ ಸರ್ಕಾರ ಒಂದು ವರ್ಷದಲ್ಲಿ ಶೂನ್ಯ ಸಾಧನೆ ಮಾಡಿದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಅಶೋಕ್ ಒತ್ತಾಯಿಸಿದರು.

ರಾಜ್ಯದ ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಿದ್ದಾರೆ,ರಾಜ್ಯ ಕೊಲೆಗಡುಕರ ಸ್ವರ್ಗವಾಗಿ ಬದಲಾಗಿದೆ ಇಂತಹ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರದ ಒಂದು ವರ್ಷ ಮುಗಿಯತೆಂಬ ಕಾರಣಕ್ಕೆ ಜನರಿಗೆ ಧನ್ಯವಾದ ತಿಳಿಸಿದ್ದಾರೊ ಅಥವಾ ಕಾನೂನು ಸುವ್ಯವಸ್ಥೆ ಹಾಳು ಮಾಡಿರುವ ಕೊಲೆಗಾರರಿಗೆ ಧನ್ಯವಾದ ಹೇಳಿದ್ದಾರೊ ಗೊತ್ತಿಲ್ಲ ಎಂದು ಟೀಕಿಸಿದರು.

ನೇಹಾ, ಅಂಜಲಿ ಕೊಲೆಯಾದರು ಇನ್ನು ಯಾವ ಹೆಣ್ಣುಮಕ್ಕಳು ಕೊಲೆಯಾಗುತ್ತಾರೊ ಎಂಬ ಆತಂಕವಿದೆ,ಹೆಣ್ಣುಮಕ್ಕಳು ಕಾಲೇಜಿಗೆ ಹೋದರೆ ಗ್ಯಾರಂಟಿ ಇಲ್ಲ, ಮನೆಯಿಂದ ಆಚೆಬಂದರೆ ಗ್ಯಾರಂಟಿ ಇಲ್ಲ,ಸರ್ಕಾರ ಎಷ್ಟು ಉಚಿತ ನೀಡಿದರೂ ಬದುಕುವ ಗ್ಯಾರಂಟಿಯೇ ಇಲ್ಲ ಎಂದು ವ್ಯಂಗ್ಯವಾಡಿದರು.

ಅಂಜಲಿಯ ಕೊಲೆಯ ಹಿಂದೆ ಪೊಲೀಸರ ಲೋಪವಿದೆ ಎಂದು ಗೃಹ ಸಚಿವರೇ ಹೇಳಿದ್ದಾರೆ ಎಂದ ಮೇಲೆ ಸರ್ಕಾರ ಯಾಕೆ ಬದುಕಿರಬೇಕು ಎಂದು ಅಶೋಕ್ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮುಸ್ಲಿಮರು ಪೊಲೀಸ್‌ ಠಾಣೆಗೆ ಹೋಗಿ ಕಪಾಳಮೋಕ್ಷ ಮಾಡುವ ಸ್ಥಿತಿ ಇದೆ, ಕೊಲೆಗಾರರನ್ನು ನೇಣಿಗೇರಿಸುವ ಬದಲು ಈ ಸರ್ಕಾರವನ್ನೇ ನೇಣಿಗೇರಿಸಬೇಕು ಎಂದು ಹೇಳಿದರು.

ಒಂದು ವರ್ಷದಲ್ಲಿ ಮಗು ಅಂಬೆಗಾಲಿಡುತ್ತದೆ,ಆದರೆ ಈ ಸರ್ಕಾರ ಇನ್ನೂ ಟೇಕಾಫ್‌ ಆಗಲೇ ಇಲ್ಲ,ರಸ್ತೆ, ನೀರಾವರಿ, ಸೇತುವೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ,ಶಾಲೆ ಕಟ್ಟಡ ದುರಸ್ತಿಗೂ ಹಣವಿಲ್ಲ. ಬಸ್‌ ಚಾಲಕರಿಗೆ, ಆಂಬ್ಯುಲೆನ್ಸ್‌ ಚಾಲಕರಿಗೆ ಸಂಬಳವಿಲ್ಲ, ರೈತರಿಗೆ ಹಾಲಿನ ಪ್ರೋತ್ಸಾಹಧನ ಸಿಕ್ಕಿಲ್ಲ ರಾಜ್ಯದ ಆರ್ಥಿಕ ಸ್ಥಿತಿ ವೆಂಟಿಲೇಟರ್‌ನಲ್ಲಿದೆ ಎಂದು ವ್ಯಂಗ್ಯ ವಾಡಿದರು.

ಸಿಎಂ ಸಿದ್ದರಾಮಯ್ಯನವರು 15 ಬಜೆಟ್‌ ಮಂಡಿಸಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ದೂರಿದರು.

ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ದಾಖಲೆಯ ಬರ ಪರಿಹಾರ ಸಿಕ್ಕಿದೆ. ಆದರೆ ಇನ್ನೂ 2 ಲಕ್ಷ ರೈತರಿಗೆ ಪರಿಹಾರ ನೀಡಬೇಕಿದೆ. ಕೆಲವರಿಗೆ 300, 400 ರೂ. ಪರಿಹಾರ ನೀಡಿದ್ದಾರೆ. ಬಿತ್ತನೆ ಮಾಡಬೇಡಿ ಎಂದು ಮೊದಲಿಗೆ ಹೇಳಿ, ಈಗ ಬಿತ್ತನೆ ಮಾಡದವರಿಗೆ ಪರಿಹಾರ ನೀಡುತ್ತಿಲ್ಲ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದಲ್ಲಿ ಈ ಸರ್ಕಾರ ಚೆನ್ನಾಗಿ ಲೂಟಿ ಮಾಡಿದೆ‌,ಅದೇ ಇವರ ಸಾಧನೆ,ಬ್ರ್ಯಾಂಡ್‌ ಬೆಂಗಳೂರು ಮಾಡುತ್ತೇವೆಂದು ಹೇಳಿ ನೀರಿನ ಸಮಸ್ಯೆ ತಂದು ಬ್ಯಾಡ್‌ ಬೆಂಗಳೂರು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸಲು ಅವರ ಶಾಸಕರೇ ತಯಾರಾಗಿದ್ದಾರೆ. ಒಂದು ವರ್ಷ ಶಾಸಕರಿಗೆ ಅನುದಾನ ನೀಡದಿದ್ದರಿಂದ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಸರ್ಕಾರ ಬೀಳಿಸಲು ಅವರೇ ಮುಹೂರ್ತ ನಿಗದಿ ಮಾಡಲಿದ್ದಾರೆ ಕೌಂಟ್‌ಡೌನ್‌ ಸ್ಟಾರ್ಟ್ ಆಗಿದೆ ಎಂದು ಅಶೋಕ್ ಬಾಂಬ್ ಸಿಡಿಸಿದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ‌ಹಾಜರಿದ್ದರು.


Share this with Friends

Related Post