Tue. Jan 14th, 2025

ಹಸುವಿನ ಕೆಚ್ಚಲು ಕೊಯ್ದ ಘಟನೆ:ರಾಜ್ಯದ್ಯಂತ ಬಿಜೆಪಿ ಪ್ರತಿಭಟನೆ-ಅಶೋಕ್

Share this with Friends

ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣದ ಸೂಕ್ತ ತನಿಖೆಗಾಗಿ ಆಗ್ರಹಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಹಸುವಿನ ಮಾಲಿಕ ಕರ್ಣ‌ ಅವರಿಗೆ ಬಿಜೆಪಿಯಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಅವರೊಂದಿಗೆ ಸೇರಿ ಆರ್ಥಿಕ ನೆರವು ನೀಡಿದ ವೇಳೆ ಅಶೋಕ್ ಸುದ್ದಿಗಾರರೊರೊಂದಿಗೆ ಮಾತನಾಡಿದರು.

ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದು, ರಕ್ತ ಸುರಿಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಆದರೆ ಇದು ಒಬ್ಬರೇ ಮಾಡಿದ ಕೃತ್ಯವಲ್ಲ ಇದರಲ್ಲಿ ಹಲವರು ಭಾಗಿಯಾಗಿದ್ದಾರೆ ಎಂದು ಹೇಳಿದರು.

ಈ ಕುರಿತು ಪೊಲೀಸರು ಸರಿಯಾಗಿ ತನಿಖೆ ಮಾಡಬೇಕಿತ್ತು,ಮಾಡಿಲ್ಲಾ, ಈಗ ಸಂಕ್ರಾಂತಿ ಹಬ್ಬ ನಡೆಯುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಇಂತಹ ಸಮಯದಲ್ಲೇ ಈ ಕೃತ್ಯ ಮಾಡುವುದರ ಜೊತೆಗೆ ಹಸು ಮಾಲೀಕ ಕರ್ಣ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹಸುವನ್ನು ಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

1 ಲಕ್ಷ ರೂ ಪರಿಹಾರವನ್ನು ಹಸು ಮಾಲೀಕ ಕರ್ಣ ಅವರಿಗೆ ಬಿಜೆಪಿ ವತಿಯಿಂದ ನೀಡಲಾಗಿದೆ. ಹಿಂದೂಗಳು ಬೇಡುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್‌ನವರು ಒಂದು ಕೈಯಲ್ಲಿ ಹಸುವನ್ನು ನೀಡುತ್ತಾರೆ. ಮತ್ತೊಂದು ಕಡೆ ಅವರ ಕಡೆಯವರೇ ನೀಡುವ ಹಸುವನ್ನು ಕತ್ತರಿಸುತ್ತಾರೆ ಎಂದು ಕಿಡಿಕಾರಿದರು.

ನನಗೀಗ ಪೊಲೀಸರು ಹಾಗೂ ಸರ್ಕಾರದ ಮೇಲೆಯೇ ಅನುಮಾನ ಬಂದಿದೆ. ಆರೋಪಿ ಜೇಬಿನಲ್ಲಿ ಬ್ಲೇಡ್‌ ಇಟ್ಟುಕೊಂಡು ಓಡಾಡುತ್ತಿದ್ದ, ಆತನಿಗೆ ಮತಿಭ್ರಮಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂತಹ ವ್ಯಕ್ತಿ 10 ವರ್ಷ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ, ಮುಂಜಾನೆ 3-4 ಗಂಟೆಗೆ ಆತ ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇಲ್ಲಿ ಪಶು ಆಸ್ಪತ್ರೆ ಬಹಳ ಕಡಿಮೆ ಸಂಖ್ಯೆಯಲ್ಲಿದೆ. ಅದರ ಜಾಗ ಲೂಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾತೆ ತಿದ್ದುಪಡಿ ಮಾಡಿ ವಕ್ಫ್‌ ಮಂಡಳಿಗೆ ನೀಡಿದ್ದಾರೆ. ಹಸು ಮಾಲೀಕ ಕರ್ಣನ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಆದರೆ ಹಸುವಿನ ಮೇಲೆ ದಾಳಿ ಮಾಡಿ ಕರ್ಣನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಸಿಎಂ ಸಿದ್ದರಾಮಯ್ಯನವರ ಬಾಯಲ್ಲಿ ಯಾವುದೇ ವಿರೋಧದ ಮಾತು ಬಂದಿಲ್ಲ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯನವರು ಹಾಲು ನೀಡುವ ಹಸುವಿಗೆ ನ್ಯಾಯ ನೀಡುವ ಕೆಲಸ ಮಾಡಲಿ ಎಂದು ಅಶೋಕ್ ಆಗ್ರಹಿಸಿದರು.






Share this with Friends

Related Post