Sat. Jun 6th, 2026

2025-26ನೇ ಸಾಲಿನ ರಾಜ್ಯ ಪ್ರಶಸ್ತಿ ಘೋಷಣೆ: ದೇವನೂರು ಮಹಾದೇವ ಅವರಿಗೆ ‘ಪಂಪ ಪ್ರಶಸ್ತಿ’ ಗರಿ

Share this with Friends

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2025-26ನೇ ಸಾಲಿನ ವಿವಿಧ ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸಾಹಿತ್ಯ ಲೋಕದ ದಿಗ್ಗಜ ದೇವನೂರು ಮಹಾದೇವ ಅವರಿಗೆ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ ಸಂದಿದ್ದರೆ, ಬೆಲ್ದಾಳದ ಶ್ರೀ ಸಿದ್ದರಾಮ ಶರಣರು ಈ ಸಾಲಿನ ‘ಬಸವ ರಾಷ್ಟ್ರೀಯ ಪುರಸ್ಕಾರ’ಕ್ಕೆ ಭಾಜನರಾಗಿದ್ದಾರೆ.

ಸಚಿವ ಶಿವರಾಜ ತಂಗಡಗಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಗಿದೆ.

ಪ್ರಮುಖ ಪುರಸ್ಕೃತರ ವಿವರ:

ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಕಂಬದಹಳ್ಳಿಯ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ‘ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪುರಸ್ಕಾರ’ ನೀಡಲಾಗಿದೆ. ರಂಗಭೂಮಿ ಕ್ಷೇತ್ರದಲ್ಲಿನ ಸಾಧನೆಗಾಗಿ ಶಿವಮೊಗ್ಗದ ಪ್ರಸನ್ನ ಅವರಿಗೆ ‘ಬಿ.ವಿ. ಕಾರಂತ ಪ್ರಶಸ್ತಿ’ ಹಾಗೂ ಜಿ.ವಿ. ಶಾರದಾ ಅವರಿಗೆ ‘ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ’ ಘೋಷಿಸಲಾಗಿದೆ.

ಸಾಹಿತ್ಯ ಮತ್ತು ಕಲೆ:

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಡಾ. ಸುಕನ್ಯಾ ಮಾರುತಿ

ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: ಗಂಗಾರಾಮ ಚಂಡಾಳ (ಕೋಲಾರ)

ಕಾಯಕಯೋಗಿ ಸಿದ್ದರಾಮೇಶ್ವರ ಪ್ರಶಸ್ತಿ: ಪ್ರೊ. ಎಸ್.ಜಿ. ಸಿದ್ದರಾಮಯ್ಯ

ಅಕ್ಕಮಹಾದೇವಿ ಪ್ರಶಸ್ತಿ: ಕೆ. ನೀಲಾ

ಜಕಣಾಚಾರಿ ಪ್ರಶಸ್ತಿ: ಅಶೋಕ್ ಗುಡಿಗಾರ್

ಕುಮಾರವ್ಯಾಸ ಪ್ರಶಸ್ತಿ: ಕಲ್ಲಿನಾಥ ಶಾಸ್ತ್ರಿ (ಗದಗ)

ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಧಾರವಾಡದ ಸಿದ್ದನಗೌಡ ಪಾಟೀಲ್ ಹಾಗೂ ನಾಟ್ಯರಾಣಿ ಶಾಂತಲಾ ಪ್ರಶಸ್ತಿಗೆ ಪ್ರತಿಭಾ ಪ್ರಹ್ಲಾದ್ ಅವರನ್ನು ಆಯ್ಕೆ ಮಾಡಲಾಗಿದೆ. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಯನ್ನು ವಿ. ಹರಿ ರಾಮ್ ಅವರಿಗೆ ಹಾಗೂ ಜಾನಪದ ಶ್ರೀ ಪ್ರಶಸ್ತಿಯನ್ನು ಎಂ. ಮಹದೇವಸ್ವಾಮಿ ಮತ್ತು ಬಿ. ಲಕ್ಷ್ಮಣ ಅವರಿಗೆ ಜಂಟಿಯಾಗಿ ನೀಡಲಾಗಿದೆ.

ಗಡಿಭಾಗದ ಸಾಹಿತ್ಯ ಸೇವೆಗಾಗಿ ನೀಡಲಾಗುವ ಕೆ.ಜಿ. ಕುಂದಣಗಾರ ಪ್ರಶಸ್ತಿಗೆ ಅಲ್ಲಾಭಕ್ಷ್ ಮೀರಸಾಹೇಬ ಮಿರ್ಜಿ ಆಯ್ಕೆಯಾಗಿದ್ದಾರೆ. ಎಲ್ಲಾ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿರುವ ಸಚಿವರು, ಶೀಘ್ರದಲ್ಲೇ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.

 


Share this with Friends

Related Post