ಬೆಂಗಳೂರು: ಹೊಸ ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ದಪಡಿಸಿದ್ದ ಭಾಷಣ ಓದದೆ ಆಡಳಿತ ಪಕ್ಷದಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರ ಸಿದ್ದಪಡಿಸಿದ್ದ ಪೂರ್ಣ ಭಾಷಣ ಮಾಡಿದ್ದು, ಸರ್ಕಾರದ ಸಾಧನೆಗಳನ್ನು ಪ್ರಶಂಸಿಸಿ ಗಮನ ಸೆಳೆದರು.
ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 77 ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯಪಾಲ ಥಾವರ್ ಚದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು. ನಂತರ ರಾಜ್ಯದ ಜನತೆಯನ್ನಿದ್ದೇಶಿಸಿ ಮಾತನಾಡಿದ ಅವರು,ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 1.13 ಲಕ್ಷ ಕೋಟಿ ರೂ.ಗಳಿಗೂ ಅನುದಾನವನ್ನು ಹೆಚ್ಚಿನ ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಮಹಿಳಾ ಸಮುದಾಯದಲ್ಲಿ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ ಬಂದಿದೆ. ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಇವೆಲ್ಲದರ ಜೊತೆಗೆ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ನಗರವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆಯೆಂದು ಸಮೀಕ್ಷೆಗಳು ಹೇಳುತ್ತಿವೆ. ಈ ಸಂಗತಿಯು ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸರ್ಕಾರವು ‘ಯೂನಿವರ್ಸಲ್ ಬೇಸಿಕ್ ಇನ್‌ಕಂ’ ಎಂಬ ತತ್ವದ ಆಧಾರದ ಮೇಲೆ ತಂದಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆಯೆಂದು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಉತ್ತಮ ಆಹಾರ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬೇಕಾದ ಆರ್ಥಿಕ ಚಟುವಟಿಕೆಗಳಿಗೆ ಕರ್ನಾಟಕವು ಜಾರಿಗೆ ತಂದಿರುವ ಕಾರ್ಯಕ್ರಮಗಳು ಕಾರಣವಾಗಿವೆ. ಇವುಗಳ ಜೊತೆಗೆ ‘ಅಕ್ಕ’ ಕಾರ್ಯ ಪಡೆಗಳನ್ನು ರಚಿಸಿ ಅವುಗಳ ಮೂಲಕ 25 ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇವುಗಳಷ್ಟೇ ಅಲ್ಲದೆ ಕರ್ನಾಟಕವು ಇಡೀ ದೇಶದಲ್ಲಿಯೇ ಮಹಿಳಾ ಕಾರ್ಮಿಕರ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕ್ರಾಂತಿಕಾರಕವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮಹಿಳಾ ಕಾರ್ಮಿಕರಿಗೆ ವಾರ್ಷಿಕವಾಗಿ 12 ದಿನಗಳ ವೇತನ ಸಹಿತ ಋತುಚಕ್ರ ರಜೆಯನ್ನು ನೀಡಲಾಗುತ್ತಿದೆ ಎಂದರು.
ಕರ್ನಾಟಕವು ಇಂದು ಸೆಮಿ ಕಂಡಕ್ಟರ್, ಏರೊ ಸ್ಪೇಸ್, ಕಮ್ಯುನಿಕೇಶನ್ ಎಕ್ಯುಪಮೆಂಟ್ಸ್ ಕ್ಯಾಂಟಮ್ ತಂತ್ರಜ್ಞಾನ ಮುಂತಾದ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಜಗತ್ತಿನ ದೊಡ್ಡ ಕಂಪೆನಿಗಳು ಇಲ್ಲಿ ಹೂಡಿಕೆ ಮಾಡುತ್ತಿವೆ. ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು ಅಭಿವೃದ್ಧಿಯು ವೇಗಗೊಳ್ಳಬೇಕಾದರೆ ಜನರ ಆಸ್ತಿ ದಾಖಲೆಗಳು ಸಮರ್ಪಕವಾಗಿರಬೇಕು. ಅದಕ್ಕಾಗಿ ರಾಜ್ಯವು ನಿರಂತರವಾಗಿ ಶ್ರಮಿಸುತ್ತಿದೆ. ಕಂದಾಯ ನ್ಯಾಯಾಲಯಗಳಲ್ಲಿ ಬಹು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಶೇ.80ಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಈಗ ಕಂದಾಯ ನ್ಯಾಯಾಲಯಗಳನ್ನು ಆನ್‌ಲೈನ್ ಮುಖಾಂತರ ನಿರ್ವಹಿಸಲು ಅವಕಾಶ ಕಲ್ಪಿಸಿ ಪಾರದರ್ಶಕಗೊಳಿಸಲಾಗಿದೆ.ಜನರ ಅನುಕೂಲಕ್ಕಾಗಿ ” ಖಾತಾಗಳನ್ನು ‘ಎ’ ಖಾತಾಗಳನ್ನಾಗಿ ಪರಿವರ್ತಿಸಲು ಅನುಮೋದನೆ ನೀಡಲಾಗಿದೆ ಎಂದರು.
ಕರ್ನಾಟಕವು ಇಡೀ ದೇಶದಲ್ಲಿಯ ಶಿಕ್ಷಣ ಕ್ಷೇತ್ರದಲ್ಲಿ ಅತಿ ದೊಡ್ಡ ಸಂಕೀರ್ಣವಾಗಿ ವಿಕಾಸ ಹೊಂದುತ್ತಿದೆ. ಅತಿ ಹೆಚ್ಚು ಸಂಖ್ಯೆಯ ಮೆಡಿಕಲ್, ನರ್ಸಿಂಗ್, ಇಂಜಿನಿಯರಿಂಗ್, ಕೃಷಿ, ತೋಟಗಾರಿಕೆ, ಮಾನೇಜ್ ಮೆಂಟ್ ಕಾಲೇಜುಗಳು, ವಿಶ್ವವಿದ್ಯಾಲಯಗಳು ಇಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ. ರಾಜ್ಯವು ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸುತ್ತಿದೆ. ನಮ್ಮ ರಾಜ್ಯದಲ್ಲಿ ಸುಮಾರು 8.5 ಲಕ್ಷ ಮಕ್ಕಳು ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿದ್ದು, ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪ್ರೊ. ಸುಖ್ ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ನೀಡಿದ್ದ ವರದಿಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ವ್ಯವಸ್ಥೆ ಸುಧಾರಿಸಲು ‘ಅಕ್ಷರ ಆವಿಷ್ಕಾರ’ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕಾರಣದಿಂದಾಗಿ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದರಲ್ಲಿ ಮುಂಚೂಣಿಯಲ್ಲಿದ್ದೇವೆ. ಕುವೆಂಪು ಅವರ ಆಶಯದಂತೆ ‘ಸರ್ವ ಜನಾಂಗದ ಶಾಂತಿಯ ತೋಟ’ವೆಂಬ ಹೆಗ್ಗಳಿಕೆಯನ್ನು ಕರ್ನಾಟಕವು ರಕ್ಷಿಸುತ್ತಾ ಬಂದಿದೆ. ಸೌಹಾರ್ದ ವಾತಾವರಣವನ್ನು ಇನ್ನಷ್ಟು ಬಲವಾಗಿಸಲು ವಿಶೇಷ ಕಾರ್ಯಪಡೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಹೊಸ ಕಾಲಘಟ್ಟದಲ್ಲಿ ಡ್ರಗ್ಸ್ ಎಂಬ ಮನುಷ್ಯ ವಿರೋಧಿ ದುರಂತಕಾರಿ ಪಿಡುಗು ನಮ್ಮ ಯುವ ಜನರನ್ನು ಬಲಿ ಪಡೆಯುತ್ತಿದೆ. ಇದನ್ನು ತಪ್ಪಿಸಲು ರಾಜ್ಯವು ಈ ಪಿಡುಗಿಗೆ ಕಾರಣರಾದವರನ್ನು ನರಹತ್ಯೆಗೆ ಸಮನಾದ ಅಪರಾಧ ಮಾಡಿದವರು ಎಂದು ತೀರ್ಮಾನಿಸಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ಅಗತ್ಯವಿರುವ ಕಾನೂನುಗಳನ್ನು ರೂಪಿಸುತ್ತಿದೆ ಎಂದರು.
ಹಾಲು ಉತ್ಪಾದಕರಿಗೆ ಉತ್ತಮ ದರಗಳು ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲದೆ, ಹಿಂದೆ ಬಾಕಿ ಇದ್ದ ಪ್ರೋತ್ಸಾಹ ಧನವೂ ಸೇರಿದಂತೆ ರಾಜ್ಯದ 9.07 ಲಕ್ಷ ಹಾಲು ಉತ್ಪಾದಕರಿಗೆ 4,130 ಕೋಟಿ ರೂ.ಗಳನ್ನು ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದೆ. ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಕೊಡುವ ಪ್ರಕ್ರಿಯೆ ನಿಂತು ಹೋಗಿತ್ತು. ಪ್ರಸ್ತುತ ಸರ್ಕಾರ `ಅನುಗ್ರಹ ಯೋಜನೆಯಲ್ಲಿ 95.41 ಕೋಟಿ ರೂ.ಗಳನ್ನು ಒದಗಿಸಿ ರೈತರ ಪರ ನಿಂತಿತು.ನಮ್ಮ ಸರ್ಕಾರವು ತಾನೆಷ್ಟು ರೈತ ಪರ ಎಂಬುದನ್ನು ಸಾಬೀತು ಪಡಿಸುತ್ತಲೇ ಇದೆ ಎಂದರು.
ಬಹಳ ಕಾಲದಿಂದ ಹೋರಾಟ ನಡೆಸುತ್ತಿದ್ದ ದೇವನಹಳ್ಳಿಯ ರೈತರ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಒಂದೇ ಹಂತದಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲು ತೀರ್ಮಾನಿಸಿ ಭೂಮಿ ಕಳೆದುಕೊಳ್ಳುವ ರೈತರಿಗೆ ಉತ್ತಮ ಪರಿಹಾರದ ದರಗಳನ್ನು ನಿಗದಿಪಡಿಸಿದೆ. ರೈತ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ಸರ್ಕಾರ ಕೆಲಸ ಮಾಡುತ್ತಿದೆಎಂದರು.
ರಾಜ್ಯದ 227 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 9,574 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 3,885 ಕೋಟಿ ರೂ ಗಳ ಅಂದಾಜು ವೆಚ್ಚದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-4ನೇ ಹಂತದ ಯೋಜನೆ ಚಾಲ್ತಿಯಲ್ಲಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂಬ ಕಾರಣದಿಂದ ಅಗತ್ಯ ಇರುವ ಕಡೆಗಳಲ್ಲಿ ಇಂದಿರಾ ಕ್ಯಾಂಟೀನುಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಕರ್ನಾಟಕವು ಕಲ್ಯಾಣ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿಯೇ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿ ಚಟುವಟಿಕೆಗಳನ್ನೂ ಕೈಗೆತ್ತಿಕೊಂಡಿದೆ. ವಿಮಾನ ನಿಲ್ದಾಣಗಳು, ಸಬರ್ಬನ್ ರೈಲು ಯೋಜನೆಗಳು ಹಾಗೂ ಒಳನಾಡು ಜಲಸಾರಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ 23,094 ಕೋಟಿ ರೂ.ಗಳ ರಾಜ್ಯ ಕಡಲ ಮತ್ತು ಒಳನಾಡು ಜಲಮಾರ್ಗಗಳ ಮಾಸ್ಟರ್ ಪ್ಲಾನನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ ಒಳನಾಡು ಜಲಸಾರಿಗೆ ನೀತಿ-2024 ನ್ನು ಜಾರಿಗೊಳಿಸಲಾಗಿದೆ ಎಂದರು.
ರಾಷ್ಟ್ರದ ಏಕತೆ, ಸಮಾನತೆ, ಸಮಗ್ರತೆ ಮತ್ತು ಸಮೃದ್ಧಿಯನ್ನು ಸಾಧಿಸುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಲೇ ಇರಲಿ, ದೇಶಭಕ್ತಿ ಮತ್ತು ಏಕತೆಯ ಮನೋಭಾವವು ರಾಷ್ಟ್ರದ ಒಳಿತಿಗೆ ಕೊಡುಗೆ ನೀಡಲಿ, ಸುಭದ್ರ, ಸೌಹಾರ್ದ ಹಾಗೂ ಸಮೃದ್ಧ ಕರ್ನಾಟಕ ಹಾಗೂ ಭಾರತವನ್ನು ನಿರ್ಮಿಸಲು ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಮುನ್ನಡೆಯೋಣ. ಮಾದರಿ ಗಣತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸೋಣ ಎಂದು ರಾಜ್ಯಪಾಲರು ಕರೆ ನೀಡಿದರು.

