ಬೆಳಗಾವಿ: ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂ ಕಟ್ಟಡದ ಸಿವಿಲ್ ಕಾಮಗಾರಿಗಳು ಮುಕ್ತಾಯಗೊಂಡ ನಂತರ ಕಟ್ಟಡಗಳಲ್ಲಿ ಬಾಕಿ ಉಳಿದ ವಿದ್ಯುತ್, ಧ್ವನಿ ಮತ್ತು ಬೆಳಕು ಆಧುನಿಕ ಶೈಲಿಯ 3ಡಿ, ಡಯಾರಾಮ ಮಲ್ಟಿಮಿಡಿಯಾ ತಂತ್ರಜ್ಞಾನ ಮತ್ತು ಐನಿಮ್ಯಾಟ್ರಿಕ್ಸ್ ಇತ್ಯಾದಿ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿ ಸದಸ್ಯ ನಿರಾಣಿ ಹನುಮಂತ ರುದ್ರಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು,ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ಕೃಷ್ಣ ಜಲ ಭಾಗ್ಯ ನಿಗಮ ನಿಯಮಿತದಿಂದ ರೂ. 64.43 ಕೋಟಿ ಬಿಡುಗಡೆ ಮಾಡಲಾಗಿದ್ದು, ಇದುವರೆಗೂ ರೂ. 54.82 ಕೋಟಿ ಬಳಕೆ ಮಾಡಲಾಗಿದೆ.ಈಗಾಗಲೇ ಸಿವಿಲ್ ಕಾಮಗಾರಿಯ ಎ, ಬಿ, ಸಿ ಮತ್ತು ಎಫ್ ಬ್ಲಾಕ್‍ಗಳ ಕಾಮಗಾರಿ ಮುಕ್ತಾಯವಾಗಿದ್ದು, ಬಾಕಿ ಉಳಿದ ಡಿ ಮತ್ತು ಇ ಬ್ಲಾಕ್‍ಗಳ ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು.
ಈ ಮ್ಯೂಸಿಯಂ ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದಂತೆ ಬಸವ ಮ್ಯೂಸಿಯಂ ತಜ್ಞರ ಸಲಹಾ ಸಮಿತಿ ರಚಿಸಲಾಗಿದೆ. ಹಾಗೂ ಬಸವೇಶ್ವರ ಜೀವನ ದರ್ಶನ ಮತ್ತು ತತ್ವದರ್ಶನದೊಂದಿಗೆ ಅವರ ಚರಿತ್ರೆ ಬಾಲ್ಯ, ಯೌವನ ಮತ್ತು ಜೀವನಕ್ಕೆ ಸಂಬಂಧಿದಂತೆ, ಚಿತ್ರಕಲೆ, ಶಿಲ್ಪಕಲೆ ತ್ರಿಡಿ ತಂತ್ರಜ್ಞಾನ ಮತ್ತು ಡಯಾರಾಮ್ ಕೆಲಸ ಹಾಗೂ ವಚನಾಧಾರಿತ ವಿವರಗಳ ಮಾಹಿತಿಯನ್ನು ಡಿಜಿಟಲ್ ಹಾಗೂ ಮೂರ್ತಿಗಳ ಮುಖಾಂತರ ಪ್ರದರ್ಶಿಸಲು ವಿಸ್ತೃತ ಯೋಜನಾ ವರದಿ’ಯನ್ನು (DPR) ತಯಾರಿಸಲು ಪ್ರೊ. ಕೆ.ಬಿ ಗುಡಿಸಿ ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿ, ಪ್ರಥಮ ಹಂತದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಅದರಂತೆ ಈ ಮ್ಯೂಜಿಯಂನ ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಲು ಒಟ್ಟು 21 ಸಭೆಗಳನ್ನು ನಡೆಸಲಾಗಿದೆ. ಈ ಸಭೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಸ್ತು ಸಂಗ್ರಹಾಲಯವನ್ನು ಹೇಗೆ ಮಾಡಬೇಕೆಂದು ಚರ್ಚಿಸಲಾಗಿದೆ ಎಂದರು.
12 ನೇ ಶತಮಾನದಲ್ಲಿ ಸಮಗ್ರ ಶರಣರ ಜೀವನ ಸಾಧನೆಗಳನ್ನು ಒಳಗೊಂಡಂತೆ, ಬಸವಣ್ಣನವರ ಸಂಪೂರ್ಣ ಜೀವನ ಚಿತ್ರಣವನ್ನು, ವಚನಾಧಾರಿತ ಚಿಂತನೆಗಳನ್ನು, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಅದರಲ್ಲಿ ಅಳವಡಿಸಬೇಕೆಂದು ತೀರ್ಮಾನಿಸಲಾಗಿದೆ. ಎಲ್ಲಾ ಚಿಂತನೆಗಳನ್ನು ಕನ್ನಡ, ಹಿಂದಿ, ಭಾಷೆಗಳಲ್ಲಿ ದೊರುಕುವಂತೆ ಮಾಡಬೇಕು ಎಂದು ನಿರ್ಣಯಿಸಲಾಗಿದ್ದು, ಸದರಿ ಸಭೆಯ ನಿರ್ಣಯದಂತೆ ಪ್ರಚಲಿತ ಕಾಮಗಾರಿಗಳು ಸಾಗುತ್ತಾ ಬಂದಿವೆ ಎಂದು ತಿಳಿಸಿದರು.
ಕಾವೇರಿ-2, ಇ-ಸ್ವತ್ತು ಡಿಜಿಟಲ್ ಡೇಟಾ ಲಿಂಕ್ ಗೆ ತ್ವರಿತ ಪರಿಹಾರ:
ರಾಜ್ಯದಲ್ಲಿ ಕಾವೇರಿ-2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡುವಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹೇಳಿದರು.
ಪರಿಷತ್ತಿನಲ್ಲಿ ಸದಸ್ಯ ಡಿ.ಎಸ್.ಅರುಣ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾವೇರಿ 2.0 ತಂತ್ರಾಂಶದಲ್ಲಿ ವಿಭಾಗಪತ್ರ ಹಾಗೂ ದಾನಪತ್ರಗಳ ನೋಂದಣಿ ಸ್ಥಗಿತವಾಗಿರುವುದಿಲ್ಲ. ಆರ್‍ಟಿಸಿ, ಮೋಜಿಣಿ ನಕ್ಷೆ, ಇ ಸ್ವತ್ತು ಖಾತಾ, ಇ-ಆಸ್ತಿ ಖಾತಾ ಹಾಗೂ ಯುಎಲ್ ಎಮ್ ಎಸ್ ಖಾತಾ ಹೊಂದಿರುವ ಸ್ವತ್ತುಗಳ ವಿಭಾಗಪತ್ರ ಹಾಗೂ ದಾನಪತ್ರಗಳು ಎಂದಿನಂತೆ ನೋಂದಣಿ ಆಗುತ್ತಿವೆ. ಕಾವೇರಿ 2.0 ತಂತ್ರಾಂಶದಲ್ಲಿ 2024-25ನೇ ಸಾಲಿನಲ್ಲಿ 1,15,068 ವಿಭಾಗ ಪತ್ರಗಳು ಮತ್ತು 1,39,134 ದಾನಪತ್ರಗಳು ಅದೇ ರೀತಿ 2025-26ನೇ ಸಾಲಿನಲ್ಲಿ 79,515 ವಿಭಾಗ ಪತ್ರಗಳು ಹಾಗೂ 92,618 ದಾನಪತ್ರಗಳು ನೋಂದಣಿ ಆಗಿವೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದ ಎಸಿ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ :
ಸರ್ಕಾರದ ಉಪವಿಭಾಗಾಧಿಕಾರಿಗಳ ಎಸಿ ಕೋರ್ಟ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರ್ಕಾರವು ಶೆ.80ರಷ್ಟು ವಿಲೇ ಮಾಡಿದ್ದು, ಇನ್ನುಳಿದ ಬಾಕಿ ಪ್ರಕರಣಗಳನ್ನು ಸಹ ಇತ್ಯರ್ಥಗೊಳಿಸಲು ಸರ್ಕಾರ ಬದ್ದವಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.
ಪರಿಷತ್ತಿನಲ್ಲಿ ಡಿ.17ರಂದು ನಡೆದ ಪ್ರಶ್ನೋತ್ತರ ವೇಳೆ ಸದಸ್ಯರಾದ ರಾಮೋಜಿ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ಚು ಪ್ರಕರಣಗಳು ಬಾಕಿ ಇರುವ ಜಿಲ್ಲೆಗಳಲ್ಲಿನ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳನ್ನು ಉಪ ವಿಭಾಗಾಧಿಕಾರಿ ವೃಂದಕ್ಕೆ ಸಮಾನಾಂತರ ವೃಂದದ ಇತರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎ.ಎಸ್ ಅಧಿಕಾರಿಗಳಿಗೆ ಕಾರ್ಯಹಂಚಿಕೆ ಮಾಡಿ ಸರ್ಕಾರವು ಆದೇಶಿಸಿರುತ್ತದೆ ಎಂದರು.
ಕಂದಾಯ ನ್ಯಾಯಲಯಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ದಕ್ಷತೆ, ಸಕಾಲಿಕ ವಿಲೇವಾರಿ ಮತ್ತು ಲಭ್ಯತೆಯ ಹಿತದೃಷ್ಟಿಯಿಂದ ಡಿಜಿಟಲ್ ಸಹಿ ಅಥವಾ ಸಮಾನವಾದ ಕಾನೂನು ಬದ್ಧವಾಗಿ ಗುರುತಿಸಲ್ಪಟ್ಟ ಎಲೆಕ್ಟ್ರಾನಿಕ್ ವಿಧಾನಗಳಿಂದ ದೃಢೀಕರಣದೊಂದಿಗೆ ಕೇಂದ್ರೀಕೃತ ವೇದಿಕೆಯ ಮೂಲಕ ಅಂತಹ ಎಲ್ಲಾ ಎರಡು ಪ್ರಕ್ರಿಯೆಗಳ ಆನ್‍ಲೈನ್ ಫೈಲಿಂಗ್ ಮತ್ತು ಎಲೆಕ್ಟ್ರಾನಿಕ್ ನಿರ್ವಹಣೆಯನ್ನು ಒದಗಿಸುವುದು ಸೂಕ್ತವೆಂದು ಪರಿಗಣಿಸಿ ಕರ್ನಾಟಕ ಕಂದಾಯ ನ್ಯಾಯಾಲಯದ ನಡವಳಿಗಳು (ಆನ್‍ಲೈನ್ ಸಲ್ಲಿಕೆ, ದೃಢೀಕರಣ ಮತ್ತು ಡಿಜಿಟಲೀಕರಣ) ಸರ್ಕಾರವು ದಿ.29.08.2025ರಂದು ಅಧಿಸೂಚನೆ ಹೊರಡಿಸಲಾಗಿರುತ್ತದೆ. ಇದರಿಂದಾಗಿ ಕಂದಾಯ ನ್ಯಾಯಾಲಯಗಳು ನಿರ್ವಹಣೆಯನ್ನು ಕಡ್ಡಾಯವಾಗಿ ಆರ್‍ಸಿಸಿಎಂಎಸ್ ತಂತ್ರಾಂಶದಲ್ಲಿಯೇ ನಿರ್ದೇಶಿಸಲಾಗಿರುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

