ಬೆಂಗಳೂರು:ಮುಂಬರುವ ಗಣೇಶ ಚತುರ್ಥಿ (ದಿನಾಂಕ: 14.09.2026) ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಲಮೂಲಗಳ ಸಂರಕ್ಷಣೆಗಾಗಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರು ನಗರಾಭಿವೃದ್ಧ ಸಚಿವ ಕೃಷ್ಣಬೈರೇಗೌಡ ಅವರಿಗೆ ಮಹತ್ವದ ಪತ್ರವೊಂದನ್ನು ಬರೆದಿದ್ದಾರೆ. ಮಾರುಕಟ್ಟೆಯಲ್ಲಿ ಪಿ.ಓ.ಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿಯವರ ‘ಮನ್ ಕೀ ಬಾತ್’ ಕರೆಗೆ ಓಗೊಟ್ಟ ಸುರೇಶ್ ಕುಮಾರ್
ಕಳೆದ ಜೂನ್ 28, 2026 ರಂದು ನಡೆದ “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಬ್ಬಕ್ಕೂ 75 ದಿನಗಳ ಮುಂಚಿತವಾಗಿಯೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವಂತೆ ದೇಶದ ಜನತೆಗೆ ವಿಶೇಷ ಕರೆ ನೀಡಿದ್ದರು. ಪ್ರಧಾನಿಯವರ ಈ ಪರಿಸರ ಕಾಳಜಿಯ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಸುರೇಶ್ ಕುಮಾರ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಕುರಿತು ಈ ಹಿಂದೆ ಜೂನ್ 29 ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ತದನಂತರ ಜುಲೈ 12 ರ ಭಾನುವಾರದಂದು ಮತ್ತೊಂದು ನೆನಪೋಲೆಯನ್ನು (Reminder) ಕಳುಹಿಸಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯ ಆಯುಕ್ತರು ಜುಲೈ 13 ರಂದು ಸೂಕ್ತ ಕ್ರಮದ ಭರವಸೆ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ, ಇದೀಗ ಸಚಿವ ಕೃಷ್ಣಬೈರೇಗೌಡರ ಮಧ್ಯಸ್ಥಿಕೆಗೆ ಸುರೇಶ್ ಕುಮಾರ್ ಕೋರಿದ್ದಾರೆ.
ಸಚಿವ ಕೃಷ್ಣಬೈರೇಗೌಡರಿಗೆ ಬರೆದ ಪತ್ರದಲ್ಲೇನಿದೆ?
ಶಾಸಕ ಸುರೇಶ್ ಕುಮಾರ್ ಅವರು ಸಚಿವರಿಗೆ ಬರೆದ ಪತ್ರದಲ್ಲಿ ಪ್ರಮುಖವಾಗಿ ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:
ಜಲಮೂಲಗಳ ನಾಶಕ್ಕೆ ತಡೆ: ಪಿ.ಓ.ಪಿ ಮೂರ್ತಿಗಳು ಮತ್ತು ಅವುಗಳಿಗೆ ಬಳಸುವ ರಾಸಾಯನಿಕ ಬಣ್ಣಗಳು ಬೆಂಗಳೂರಿನ ಕೆರೆಗಳನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತಿವೆ.
ಸಾಂಪ್ರದಾಯಿಕ ಶ್ರದ್ಧೆಯ ರಕ್ಷಣೆ: ಹಬ್ಬ ಮುಗಿದ ನಂತರ ಕೆರೆಗಳ ದಂಡೆಯಲ್ಲಿ ಕರಗದೆ ಬಿದ್ದಿರುವ ದೇವರ ಮೂರ್ತಿಗಳ ಅವಶೇಷಗಳು ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ತರುತ್ತಿವೆ.
ಸರ್ಕಾರದ ಮಟ್ಟದಲ್ಲಿ ಕಠಿಣ ಆದೇಶ: ಮುಜರಾಯಿ ಸಂಸ್ಥೆಗಳು ಮತ್ತು ಜಿಲ್ಲಾಡಳಿತಗಳ ಮೂಲಕ ಪಿ.ಓ.ಪಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಬೇಕು.
ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಪತ್ರ
ಪರಿಸರ ಸಂರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಕೀಯವಿಲ್ಲದೆ, ಆಡಳಿತ ಪಕ್ಷದ ಹಿರಿಯ ಸಚಿವರಾದ ಕೃಷ್ಣಬೈರೇಗೌಡ ಅವರಿಗೆ ವಿರೋಧ ಪಕ್ಷದ ಹಿರಿಯ ನಾಯಕರಾದ ಸುರೇಶ್ ಕುಮಾರ್ ಅವರು ಪತ್ರ ಬರೆದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.

