Sun. Aug 30th, 2026

ಗೃಹಲಕ್ಷ್ಮಿಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ವಿದ್ಯುದ್ದೀಪಾಲಂಕಾರದಲ್ಲಿ ಕಂಗೊಳಿಸಿದ ವಿಧಾನಸೌಧ, ಮೈಸೂರು ಅರಮನೆ!

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಈ ಸಂಭ್ರಮದ ಸವಿನೆನಪಿಗಾಗಿ ರಾಜ್ಯದ ಪ್ರಮುಖ ಐತಿಹಾಸಿಕ ಸ್ಮಾರಕಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ಮಹಿಳಾ ಸಬಲೀಕರಣದ ಸಂಕೇತವಾಗಿರುವ ಆಕರ್ಷಕ ಗುಲಾಬಿ ಬಣ್ಣದ (Pink Light) ವಿಶೇಷ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಭಾನುವಾರ (ಆಗಸ್ಟ್ 30) ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ವಿಶೇಷ ಬೆಳಕಿನ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿತ್ತು.

ಗುಲಾಬಿ ಬೆಳಕಿನಲ್ಲಿ ಮಿಂದೆದ್ದ ಪ್ರಮುಖ ಪ್ರವಾಸಿ ತಾಣಗಳು:

ಮಹಿಳೆಯರ ಹೆಮ್ಮೆಯ ಪ್ರತೀಕವಾಗಿ ಇಡೀ ರಾಜ್ಯದ ಪ್ರಮುಖ ಆಕರ್ಷಣೆಗಳು ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಿದವು. ಬೆಂಗಳೂರಿನ ಭವ್ಯ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಜಗತ್ಪ್ರಸಿದ್ಧ ಮೈಸೂರು ಅರಮನೆ, ಇತಿಹಾಸ ಪ್ರಸಿದ್ಧ ಚಿತ್ರದುರ್ಗದ ಕಲ್ಲಿನಕೋಟೆ, ವಿಶ್ವ ಪಾರಂಪರಿಕ ತಾಣ ಹಂಪಿಯ ಕಲ್ಲಿನ ರಥ, ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಹಾಗೂ ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತಗಳು ಗುಲಾಬಿ ಕಾಂತಿಯಲ್ಲಿ ಮಿನುಗುವ ಮೂಲಕ ಸಾರ್ವಜನಿಕರ ಕಣ್ಮನ ಸೆಳೆದವು.

76,500 ಕೋಟಿಗೂ ಹೆಚ್ಚು ಹಣ ವರ್ಗಾವಣೆ:

ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000 ನೀಡುವ ಮೂಲಕ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿರುವ ಗೃಹಲಕ್ಷ್ಮಿ ಯೋಜನೆಯು ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಯೋಜನೆ ಆರಂಭವಾದ ದಿನದಿಂದ ಇದುವರೆಗೆ ರಾಜ್ಯದ ಒಟ್ಟು 1.20 ಕೋಟಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಒಟ್ಟು ₹76,500 ಕೋಟಿಗೂ ಅಧಿಕ ಮೊತ್ತವನ್ನು ಯಶಸ್ವಿಯಾಗಿ ಜಮಾ ಮಾಡಲಾಗಿದೆ.

ಮಹಿಳೆಯರಿಗೆ ಸಾಮಾಜಿಕ ಗೌರವ ಹಾಗೂ ಕುಟುಂಬ ನಿರ್ವಹಣೆಯಲ್ಲಿ ಆರ್ಥಿಕ ಭದ್ರತೆ ಒದಗಿಸಿರುವ ಈ ಯೋಜನೆಯ 3ನೇ ವರ್ಷದ ವಾರ್ಷಿಕೋತ್ಸವವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

 

 


Share this with Friends

Related Post