Sun. Aug 30th, 2026

ಬೇರೆಯವರ ಬಳಿ ಆಟ ಆಡಿದಂಗೆ ನನ್ನ ಬಳಿ ಆಡಬೇಡಿ:ಎಕ್ಸ್ ನಲ್ಲಿ ಕೆಣಕಿದ ಪ್ರಿಯಾಂಕ ಖರ್ಗೆಗೆ ತಿರುಗೇಟು ಕೊಟ್ಟ ಹೆಚ್ಡಿಕೆ

Share this with Friends

ತುಮಕೂರು: “ನಾನು ಕೆಪಿಎಸ್‌ಸಿ ಹಗರಣದ ಕುರಿತು ಕೇಳುತ್ತಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಡದೆ, ಕೇವಲ ಸಾಮಾಜಿಕ ಜಾಲತಾಣ ‘X’ ವೇದಿಕೆಯಲ್ಲಿ ಪೋಸ್ಟ್ ಹಾಕಿ ಜಾರಿಕೊಳ್ಳುತ್ತಿರುವುದು ಏಕೆ? ಮಿಸ್ಟರ್ ಪ್ರಿಯಾಂಕ್ ಖರ್ಗೆ, ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ. ನಾನು ಯಾವುದೇ ಅಕ್ರಮಕ್ಕೆ ಹೆದರಿ ಕದ್ದು ಹೋಗುವವನಲ್ಲ, ರಾಜಕೀಯವಾಗಿ ಪಲಾಯನ ಮಾಡುವವನೂ ಅಲ್ಲ” ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮತ್ತೊಮ್ಮೆ ಕೆಂಡಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ತನಿಖೆ ಹಾಗೂ ಒಎಂಆರ್ (OMR) ಶೀಟ್ ಹಗರಣದ ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದರು.

ದೇವನಹಳ್ಳಿ ರೆಸಾರ್ಟ್‌ನಲ್ಲಿ ನಡೆದಿದ್ದೇನು?:

ಗೃಹ ಸಚಿವರ ವಿರುದ್ಧ ಅತ್ಯಂತ ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ, “ದೆಹಲಿಯಿಂದ ದೇವನಹಳ್ಳಿಯ ರೆಸಾರ್ಟ್‌ಗೆ ಕರೆದುಕೊಂಡು ಬಂದು ಆ ಅಧಿಕಾರಿಯನ್ನು ಯಾಕೆ ಕೂರಿಸಿಕೊಂಡಿದ್ದಿರಿ? ರೆಸಾರ್ಟ್‌ನಲ್ಲಿ ಕೂತು ಓಎಂಆರ್ ಶೀಟ್ ತಿದ್ದಿಸಿದ ಆ ಅಧಿಕಾರಿಯನ್ನು ಆಮೇಲೆ ತಂದು ಸಿಐಡಿ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದು ಏಕೆ?” ಎಂದು ಪ್ರಶ್ನಿಸಿದರು. ಅಕ್ರಮದ ಮೂಲಕ ಈಗಾಗಲೇ 24 ಮಂದಿಗೆ ಸರ್ಕಾರಿ ಕೆಲಸ ಕೊಡಿಸಲಾಗಿದ್ದು, ಆ ಅಭ್ಯರ್ಥಿಗಳು ಯಾರು ಯಾರ ಸಂಬಂಧಿಕರು ಎಂಬುದನ್ನು ಗೃಹ ಸಚಿವರು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಎಫ್‌ಎಸ್‌ಎಲ್ (FSL) ವರದಿಯಲ್ಲೇ ಸಾಬೀತಾಗಿದೆ:

“ಓಎಂಆರ್ ಶೀಟ್‌ಗಳನ್ನು ಕಾರ್ಬನ್ ಕಾಪಿ ಬಳಸಿ ತಿದ್ದಿರುವ ಬಗ್ಗೆ ಇವತ್ತು ಬೀದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ತನಿಖೆಯಲ್ಲೂ ಇದು ಸ್ಪಷ್ಟವಾಗಿದ್ದು, ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (FSL) ವರದಿಯಲ್ಲೂ ಅಕ್ರಮ ನಡೆದಿರುವುದು ರುಜುವಾತಾಗಿದೆ. ಸತ್ಯ ಇಷ್ಟೊಂದು ಸ್ಪಷ್ಟವಾಗಿ ಕಣ್ಣಿಗೆ ಕಾಣಿಸುತ್ತಿದ್ದರೂ ನೀವು ತಪ್ಪು ಮಾಡಿದವರನ್ನು ಸಮರ್ಥಿಸಿಕೊಳ್ಳುತ್ತಿರುವುದರ ಅರ್ಥವೇನು?” ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಚರ್ಚೆಗೆ ಬನ್ನಿ, ಸವಾಲು ಸ್ವೀಕರಿಸಲು ಸಿದ್ಧ:

ಪ್ರಿಯಾಂಕ್ ಖರ್ಗೆ ಅವರು ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಕೇವಲ ಜಾಲತಾಣಗಳಲ್ಲಿ ‘ಬೆಟ್ಟ ಅಗೆದು ಇಲಿ ಹಿಡಿದಂತೆ’ ಪೋಸ್ಟ್ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, “ನೀವು ಮಾಡುತ್ತಿರುವುದೇ ಇಡೀ ವ್ಯವಸ್ಥೆಯ ಚಿತ್ರಾನ್ನ, ಇದರಲ್ಲಿ ಯಾರಿಗೆ ಮೃಷ್ಟಾನ್ನ ಕೊಟ್ಟಿದ್ದೀರಿ? ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ. ಬನ್ನಿ, ಈ ಅಕ್ರಮದ ಕುರಿತು ನಿಮ್ಮೊಂದಿಗೆ ಎಲ್ಲಿ ಬೇಕಾದರೂ ಮುಖಾಮುಖಿ ಮುಕ್ತ ಚರ್ಚೆಗೆ ನಾನು ಸಿದ್ಧನಿದ್ದೇನೆ” ಎಂದು ಬಹಿರಂಗ ಸವಾಲು ಹಾಕಿದರು.

ಇದನ್ನು ಇಲ್ಲಿಗೆ ನಿಲ್ಲಿಸುವ ಪ್ರಶ್ನೆಯೂ ಇಲ್ಲ. ನಾಳೆ ದೆಹಲಿಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಮಾಧ್ಯಮಗಳ ಜೊತೆ ಮಾತನಾಡುತ್ತೇನೆ. ನಿರುದ್ಯೋಗಿ ಯುವಕರ ಹಿತವನ್ನು ಬಲಿ ಕೊಡುವುದಕ್ಕೆ ನಿಮ್ಮನ್ನು ಬಿಡುವುದಿಲ್ಲ ಎಂದು ಸಚಿವರು ಗುಡುಗಿದರು.

ರಾಜ ರಾಜಕಾರಣಕ್ಕೆ ವಾಪಸ್ ಬರುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕುಮಾರಸ್ವಾಮಿ ಅವರು; ನಾನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ, ಅದು ಈಗಲ್ಲ, 2028ರ ಸಾರ್ವತ್ರಿಕರ ಚುನಾವಣೆಗೆ ಬರುತ್ತೇನೆ. ಏನೋ ನಾನೇ ಮುಂದಿನ ಏಳೂವರೆ ವರ್ಷ ಗೂಟ ಹೊಡೆದುಕೊಂಡು ಇರುತ್ತೇನೆ ಅಂತಾರಲ್ಲ.ಆಗ ನೋಡೋಣ ಯಾರ ಗೂಟ ಇರುತ್ತೆ ಎಂದು, ಜನ ಗೂಟ ಕಿತ್ತಾಕುತ್ತಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.

 

 


Share this with Friends

Related Post