Fri. Nov 6th, 2026

ಬೆಂಗಳೂರು ವಿಮಾನ ನಿಲ್ದಾಣದ ಪ್ರಮುಖ 14 ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಕರವೇ ಸಭೆ: ಸ್ಥಳೀಯರಿಗೆ ಉದ್ಯೋಗ ಹೆಚ್ಚಿಸುವ ಭರವಸೆ

Share this with Friends

ಬೆಂಗಳೂರು: ದೇವನಹಳ್ಳಿಯ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕನ್ನಡಿಗರ ಉದ್ಯೋಗ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ವಿಮಾನ ನಿಲ್ದಾಣಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರಮುಖ ಸಂಸ್ಥೆಗಳೊಂದಿಗೆ ಮಹತ್ವದ ಸೌಹಾರ್ದ ಸಭೆ ನಡೆಸಿದ್ದಾರೆ.

ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 14 ಪ್ರಮುಖ ಜಾಗತಿಕ ಹಾಗೂ ರಾಷ್ಟ್ರೀಯ ಸಂಸ್ಥೆಗಳ ಉನ್ನತಾಧಿಕಾರಿಗಳು ಈ ವಿಶೇಷ ಸಭೆಯಲ್ಲಿ ಪಾಲ್ಗೊಂಡಿದ್ದರು. ಕರವೇ ಹಮ್ಮಿಕೊಂಡಿರುವ ‘ಆಗ್ರಹ ಅಭಿಯಾನ’ದ ಭಾಗವಾಗಿ ನಡೆದ ಈ ಸಭೆಯು ಅತ್ಯಂತ ಯಶಸ್ವಿಯಾಗಿದ್ದು, ಇಲಾಖೆಯ ಪ್ರತಿನಿಧಿಗಳು ಕನ್ನಡಿಗರ ಉದ್ಯೋಗದ ಹಕ್ಕೊತ್ತಾಯಕ್ಕೆ ಆಶಾದಾಯಕವಾಗಿ ಸ್ಪಂದಿಸಿದ್ದಾರೆ ಎಂದು ನಾರಾಯಣಗೌಡರು ತಿಳಿಸಿದ್ದಾರೆ.

ಭಾಗವಹಿಸಿದ ಪ್ರಮುಖ ಸಂಸ್ಥೆಗಳು:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL), ಮೆಂಝಿಸ್ ಎವಿಯೇಷನ್, ಡಿಎಚ್‌ಎಲ್ ಎಕ್ಸ್‌ಪ್ರೆಸ್, ಶಾಪರ್ಸ್ ಸ್ಟಾಪ್, ಸ್ಟಾರ್ ಏರ್‌ಲೈನ್ಸ್, ತಾಜ್ ಸ್ಯಾಟ್ಸ್ ಇಂಡಿಯಾ ಕ್ಯಾಟರರ್ಸ್, ತಾಜ್ ಹೋಟೆಲ್, ಎಚ್‌ಎಮ್‌ಎಸ್, ಟ್ರಾವೆಲ್ ಫುಡ್ ಸರ್ವೀಸಸ್ (ಟಿಎಫ್‌ಎಸ್), ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್ ಇಂಡಿಯಾ, ಡಬ್ಲ್ಯೂಎಫ್‌ಎಸ್, ಏರ್ ಇಂಡಿಯಾ ಹಾಗೂ ಟಿಆರ್‌ಎಸ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಮತ್ತು ಮಾನವ ಸಂಪನ್ಮೂಲ (HR) ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಕರವೇ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ಒಂದು ವರ್ಷದಲ್ಲಿ ಬದಲಾವಣೆಯ ಭರವಸೆ:

“ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ನ್ಯಾಯಯುತವಾಗಿ ಉದ್ಯೋಗಾವಕಾಶಗಳು ಸಿಗಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವು. ಸಭೆಯಲ್ಲಿದ್ದ ಸಂಸ್ಥೆಗಳ ಪ್ರತಿನಿಧಿಗಳು ಸದ್ಯ ತಮ್ಮಲ್ಲಿರುವ ಸ್ಥಳೀಯ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಮುಂಬರುವ ಒಂದು ವರ್ಷದ ಅವಧಿಯಲ್ಲಿ ಸ್ಥಳೀಯರಿಗೆ ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಒಂದು ವರ್ಷದ ಬಳಿಕ ನೀವೇ ಖುದ್ದಾಗಿ ಬಂದು ಈ ಬದಲಾವಣೆಯನ್ನು ವೀಕ್ಷಿಸಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ” ಎಂದು ಕರವೇ ಅಧ್ಯಕ್ಷರು ವಿವರಿಸಿದ್ದಾರೆ. ಯಾವುದೇ ಗೊಂದಲ ಅಥವಾ ಅಪಪ್ರಚಾರಕ್ಕೆ ಅವಕಾಶ ಇರಬಾರದು ಎಂಬ ದೃಷ್ಟಿಯಿಂದ ಸಭೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನೂ ಆಹ್ವಾನಿಸಲಾಗಿತ್ತು.

350ಕ್ಕೂ ಹೆಚ್ಚು ಸಂಸ್ಥೆಗಳ ಸಂಪರ್ಕ; ಶಾಂತಿಯುತ ಅಭಿಯಾನ:

ಅಭಿಯಾನದ ಯಶಸ್ಸಿನ ಕುರಿತು ಮಾತನಾಡಿದ ಅವರು, “ಯಾರು ಏನೇ ಟೀಕಿಸಿದರೂ ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂಬ ತತ್ವದಲ್ಲಿ ನಂಬಿಕೆ ಇಟ್ಟವನು ನಾನು. ಕರವೇ ಕಾರ್ಯಕರ್ತರು ಮುನ್ನೂರೈವತ್ತಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಸಂಸ್ಥೆಗಳನ್ನು ತಲುಪಿದ್ದು, ಎಲ್ಲೂ ಸಹ ಒಂದು ಕಹಿ ಘಟನೆ ನಡೆದಿಲ್ಲ. ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ನಮ್ಮನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಈ ಆಗ್ರಹ ಅಭಿಯಾನವು ಕನ್ನಡದ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 


Share this with Friends

Related Post