ಬೆಂಗಳೂರು: ದೇಶದಲ್ಲಿ ನ್ಯಾಯ, ನೀತಿ, ಧರ್ಮ ಮತ್ತು ಸೇವಾಮನೋಭಾವ ಸದಾ ಜಾಗೃತವಾಗಿರಲು ಮಾತಾ ಅಮೃತಾನಂದಮಯಿ ಅವರಂಥ ಮಹಾತಾಯಿಗಳು ಹಾಗೂ ಧರ್ಮಗುರುಗಳ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ಲಾಘಿಸಿದ್ದಾರೆ.
ನಗರದ ಮಾತಾ ಅಮೃತಾನಂದಮಯಿ ಮಠದಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ‘ಬ್ರಹ್ಮಸ್ಥಾನಂ ದೇವಾಲಯ ಉತ್ಸವ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದ ಜನರ ಮತ್ತು ಸಮಸ್ತ ಮನುಕುಲದ ಶ್ರೇಯೋಭಿವೃದ್ಧಿಗಾಗಿ ದೇವರ ನಾಡು ಕೇರಳದಿಂದ ದೇವಿ ಸ್ವರೂಪದಲ್ಲಿ ಆಗಮಿಸಿರುವ ಅಮ್ಮನಿಗೆ ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಸ್ವಾಗತವನ್ನು ಕೋರಿದರು.
ಅಂದು ವಿವೇಕಾನಂದರು, ಇಂದು ಅಮೃತಾನಂದಮಯಿ:
ಸ್ವಾಮಿ ವಿವೇಕಾನಂದರು ಅಂದು ಕನ್ಯಾಕುಮಾರಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಧ್ಯಾನ ಮಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಇಂದು ಮಾತಾ ಅಮೃತಾನಂದಮಯಿ ಅವರು ಅದೇ ರೀತಿ ಜಗತ್ತಿಗೆ ಪ್ರೀತಿ ಮತ್ತು ಕರುಣೆಯನ್ನು ಉಣಬಡಿಸುತ್ತಿದ್ದಾರೆ ಎಂದರು. “ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ ಹಾಗೂ ದೇವರ ನೆನಪು ಭಕ್ತಿಯ ಮೂಲ. ಈ ಮೂರೂ ಅಂಶಗಳೇ ಮನುಷ್ಯತ್ವದ ನಿಜವಾದ ನೆಲೆಗಟ್ಟು. ಭಕ್ತಿ ಇಲ್ಲದ ಜ್ಞಾನ ಕುರುಡು. ಮಾನವ ಧರ್ಮಕ್ಕೆ ಜಯವಾಗಲಿ ಮತ್ತು ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ ಎಂಬ ತತ್ವವನ್ನು ಅಮ್ಮ ತಮ್ಮ ಸೇವಾ ಕಾರ್ಯಗಳ ಮೂಲಕ ಸಾಕಾರಗೊಳಿಸುತ್ತಿದ್ದಾರೆ” ಎಂದು ಭಕ್ತಿಯ ಮಹತ್ವವನ್ನು ಬಣ್ಣಿಸಿದರು.
25 ವರ್ಷಗಳ ಹಿಂದಿನ ನೆನಪು ಬಿಚ್ಚಿಟ್ಟ ಸಿಎಂ:
ತಮ್ಮ ರಾಜಕೀಯ ಜೀವನದ ಹಳೆಯ ದಿನಗಳನ್ನು ನೆನಪಿಸಿಕೊಂಡ ಡಿ.ಕೆ. ಶಿವಕುಮಾರ್ ಅವರು, “ಸುಮಾರು 25 ವರ್ಷಗಳ ಹಿಂದೆ ನಾನು ಎಚ್.ಡಿ. ದೇವೇಗೌಡರ ವಿರುದ್ಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅಮ್ಮನವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದೆ. ಅಮ್ಮ ಬರೀ ಪ್ರೀತಿಯ ಸಂಕೇತ ಮಾತ್ರವಲ್ಲ, ಮಾನವೀಯತೆ ಮತ್ತು ಸೇವಾಧರ್ಮದ ಜೀವಂತ ರೂಪ. ಇಡೀ ಬದುಕನ್ನು ಜನರ ಸೇವೆಗಾಗಿ ಮುಡುಪಾಗಿಟ್ಟಿರುವ ಇಂತಹ ಪುಣ್ಯ ಚೇತನಗಳ ಸನ್ನಿಧಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರೆಯುತ್ತದೆ” ಎಂದು ಹೃತೂರ್ವಕವಾಗಿ ನುಡಿದರು

