Fri. Nov 6th, 2026

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 80 ಉದ್ಯೋಗ ಭರವಸೆ ಈಡೇರಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಬಹಿರಂಗ ಪತ್ರ

Share this with Friends

ಬೆಂಗಳೂರು: ರಾಜ್ಯದ ಸಾರ್ವಜನಿಕ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇ. 80ರಷ್ಟು ಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸುವ ಮೂಲಕ ಕನ್ನಡದ ಮಕ್ಕಳ ಭವಿಷ್ಯವನ್ನು ಕಾಯುವಂತೆ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

ಬ್ಲಾಕ್‌ಮೇಲ್ ತಂತ್ರಕ್ಕೆ ಮಣಿಯಬೇಡಿ:

ನೀವು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದಾಗಲೇ ಈ ಪ್ರಣಾಳಿಕೆ ಸಿದ್ಧಗೊಂಡಿದ್ದು, ನಿಮ್ಮ ಕನ್ನಡ ಪ್ರೇಮದ ಹಿನ್ನೆಲೆಯಲ್ಲೇ ಈ ಅಂಶ ಸೇರಿಸಲಾಗಿತ್ತು ಎಂಬುದು ನಮಗೆ ಗೊತ್ತು ಎಂದು ನಾರಾಯಣಗೌಡರು ಸ್ಮರಿಸಿದ್ದಾರೆ. “ಕೊಟ್ಟ ಭರವಸೆ ಈಡೇರಿಸುವುದು ಸರ್ಕಾರದ ಸಾಂವಿಧಾನಿಕ ಹಾಗೂ ನೈತಿಕ ಕರ್ತವ್ಯ. ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್‌ಮೇಲ್ ಮಾಡುವ ಉದ್ಯಮಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ನಿಮ್ಮ ಹಠ ಮತ್ತು ಛಲದ ಗುಣದ ಬಗ್ಗೆ ನಮಗೆ ಅರಿವಿದ್ದು, ಇಂತಹ ಒತ್ತಡಗಳನ್ನು ಮೆಟ್ಟಿನಿಂತು ಕಾಯ್ದೆ ಜಾರಿಗೊಳಿಸಿದರೆ ಕನ್ನಡಿಗರು ನಿಮ್ಮನ್ನು ಸದಾ ಹೃದಯದಲ್ಲಿಟ್ಟುಕೊಳ್ಳುತ್ತಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಕ್ಷಾತೀತ ಬೆಂಬಲವಿದೆ:

ಕನ್ನಡಿಗರಿಗೆ ಉದ್ಯೋಗ ನೀಡುವ ವಿಷಯದಲ್ಲಿ ಸರ್ಕಾರಕ್ಕೆ ಯಾರ ವಿರೋಧವೂ ಇರಲು ಸಾಧ್ಯವಿಲ್ಲ. ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ್ ಲಾಡ್ ಅವರು ಈ ಕಾಯ್ದೆ ಜಾರಿಗೆ ತರಲು ಬದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಒಂದು ವೇಳೆ ಯಾರಿಗಾದರೂ ತಕರಾರಿದ್ದರೆ ಕರವೇ ವತಿಯಿಂದಲೇ ವಿರೋಧ ಪಕ್ಷಗಳ ಮನವೊಲಿಸುವ ಕೆಲಸ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

‘ಆಗ್ರಹ ಅಭಿಯಾನ’ದ ಯಶಸ್ಸು:

ನವೆಂಬರ್ 1ರಿಂದ ಕರವೇ ಆರಂಭಿಸಿರುವ ಉದ್ಯೋಗ ಸಮೀಕ್ಷೆಯ ‘ಆಗ್ರಹ ಅಭಿಯಾನ’ ಯಶಸ್ವಿಯಾಗಿ ಸಾಗುತ್ತಿದ್ದು, ಈವರೆಗೆ 350ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಮತ್ತು ಖಾಸಗಿ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ. ಈ ಸಮೀಕ್ಷೆಯ ನೈಜ ವರದಿಯನ್ನು ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸಲಾಗುವುದು. ಹೀಗಾಗಿ ಸರ್ಕಾರ ತಕ್ಷಣವೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಮಂಡಿಸಿ ಅನುಮೋದನೆ ನೀಡಬೇಕು. ಕಾಯ್ದೆ ಜಾರಿಯಾದರೆ ಲಕ್ಷಾಂತರ ಕನ್ನಡದ ಮಕ್ಕಳನ್ನು ಒಟ್ಟುಗೂಡಿಸಿ ಇಡೀ ಸರ್ಕಾರಕ್ಕೆ ಬೃಹತ್ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ನಾರಾಯಣಗೌಡರು ಪತ್ರದಲ್ಲಿ ತಿಳಿಸಿದ್ದಾರೆ.

 

 


Share this with Friends

Related Post