Fri. Nov 6th, 2026

ರಾಜ್ಯದ ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ ದೃಢ: ಉನ್ನತ ಮಟ್ಟದ ಸಮಿತಿ ರಚನೆಗೆ ಸಚಿವ ರಿಜ್ವಾನ್ ಅರ್ಷದ್ ಆಗ್ರಹ

Share this with Friends

ಬೆಂಗಳೂರು: ದೇಶಾದ್ಯಂತ ಜಾರಿಯಲ್ಲಿರುವ ಇ20 (E20) ಇಂಧನ ನೀತಿಯ ನಡುವೆಯೇ, ಕರ್ನಾಟಕದ ಇಂಧನ ಮಾರುಕಟ್ಟೆಯಲ್ಲಿ ಭಾರಿ ಆಘಾತಕಾರಿ ಸತ್ಯವೊಂದು ಬಯಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳ ಸ್ವತಂತ್ರ ಪ್ರಯೋಗಾಲಯ ಪರೀಕ್ಷೆಯಲ್ಲಿ ಎಥೆನಾಲ್ ಪ್ರಮಾಣವು ನಿಗದಿತ ಶೇ. 20 ಕ್ಕಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಿರುವುದು ಪತ್ತೆಯಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿಸ್ತೃತ ಮಾಹಿತಿ ಹಂಚಿಕೊಂಡ ಅವರು, ಪ್ರಮುಖ ಇಂಧನ ಕಂಪನಿಗಳಾದ ಐಒಸಿಎಲ್ (IOCL) ಮಾದರಿಯಲ್ಲಿ ದಾಖಲೆಯ ಶೇ. 31.2 ಹಾಗೂ ಎಚ್‌ಪಿಸಿಎಲ್ (HPCL) ಮಾದರಿಯಲ್ಲಿ ಶೇ. 30.5 ರಷ್ಟು ಅತಿಯಾದ ಎಥೆನಾಲ್ ಮಿಶ್ರಣವಾಗಿರುವುದು ದೃಢಪಟ್ಟಿದೆ ಎಂದು ಬಹಿರಂಗಪಡಿಸಿದರು.

ವಾಹನ ಸವಾರರ ಜೇಬಿಗೆ ಕತ್ತರಿ; ಮೈಲೇಜ್ ಕಡಿತ:

ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ ಬೆರೆಸುತ್ತಿರುವುದರಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇಂಜಿನ್ ಹಾನಿ ಹಾಗೂ ದುರಸ್ತಿ ವೆಚ್ಚಗಳು ದಿನೇ ದಿನೇ ಹೆಚ್ಚುತ್ತಿವೆ. ಈ ಅನಧಿಕೃತ ಮಿಶ್ರಣದಿಂದಾಗಿ ದೇಶಾದ್ಯಂತ ವಾಹನ ಸವಾರರಿಗೆ ವಾರ್ಷಿಕವಾಗಿ ಸುಮಾರು ₹1.01 ಲಕ್ಷ ಕೋಟಿ ಆರ್ಥಿಕ ನಷ್ಟವಾಗುವ ಸಂಭಾವ್ಯತೆ ಇದೆ. ಇದರಲ್ಲಿ ₹62,000 ಕೋಟಿ ಹೆಚ್ಚುವರಿ ಇಂಧನ ಖರೀದಿ ಹಾಗೂ ₹39,000 ಕೋಟಿ ವಾಹನ ದುರಸ್ತಿ ವೆಚ್ಚ ಒಳಗೊಂಡಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಇಂತಹ ಇಂಧನ ಬಳಕೆಯಿಂದ ಉಂಟಾಗುವ ಇಂಜಿನ್ ಹಾನಿಯನ್ನು ವಾಹನ ಕಂಪನಿಗಳ ವಾರಂಟಿ ಹಾಗೂ ವಿಮಾ ಪಾಲಿಸಿಗಳು ಭರಿಸುತ್ತವೆಯೇ ಎಂಬ ಗಂಭೀರ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಪ್ರತಿ ಬಂಕ್‌ನಲ್ಲೂ ಎಥೆನಾಲ್ ಪ್ರಮಾಣ ಪ್ರದರ್ಶನ ಕಡ್ಡಾಯಕ್ಕೆ ಆಗ್ರಹ:

ಗ್ರಾಹಕರ ಹಿತರಕ್ಷಣೆಗಾಗಿ ಇಂಧನ ಕಂಪನಿಗಳ ಈ ಲೂಟಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ತಕ್ಷಣವೇ ಉನ್ನತ ಮಟ್ಟದ ಸಮಿತಿ ರಚಿಸಬೇಕು ಮತ್ತು ನಿಯಮ ಉಲ್ಲಂಘಿಸಿದ ಕಂಪನಿಗಳಿಗೆ ದಂಡ ವಿಧಿಸಬೇಕು ಎಂದು ಸಚಿವರು ಒತ್ತಾಯಿಸಿದರು. ಗ್ರಾಹಕರು ಸೂಕ್ತ ನಿರ್ಧಾರ ತಳೆಯಲು ಅನುಕೂಲವಾಗುವಂತೆ ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ಪ್ರತಿದಿನದ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಅವರು ಆಗ್ರಹಿಸಿದರು. ಇದರೊಂದಿಗೆ ಇ20 ಹಾನಿ ಪರಿಹಾರ ನಿಧಿ ಸ್ಥಾಪನೆ ಹಾಗೂ ವಿಮಾ ನಿಯಮಗಳ ಮರುಪರಿಶೀಲನೆಗೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದರು.

ರಾಜ್ಯ ಸರ್ಕಾರವು ಈ ಪರೀಕ್ಷಾ ವರದಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಸಲ್ಲಿಕೆ ಮಾಡಲಿದ್ದು, ಗ್ರಾಹಕರಿಗೆ ಶುದ್ಧ ಹಾಗೂ ನಿಖರ ಅಳತೆಯ ಇಂಧನ ಸಿಗುವಂತೆ ಮಾಡಲು ‘ಮಿಷನ್ ನಿಖರ’ ಅಭಿಯಾನದ ಅಡಿಯಲ್ಲಿ ರಾಜ್ಯಾದ್ಯಂತ ಪೆಟ್ರೋಲ್ ಗುಣಮಟ್ಟ ಪರೀಕ್ಷಾ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದರು

 


Share this with Friends

Related Post