ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ವೇತನದಾರರಿಗೆ ಕರ್ನಾಟಕ ಸರ್ಕಾರವು ದೀಪಾವಳಿ ಹಬ್ಬದ ಭರ್ಜರಿ ಕೊಡುಗೆ ನೀಡಿದೆ. 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ (Dearness Allowance) ದರವನ್ನು ಪ್ರಸ್ತುತ ಮೂಲ ವೇತನದ ಶೇ. 15.75 ರಿಂದ ಶೇ. 18ಕ್ಕೆ ಪರಿಷ್ಕರಿಸಿ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ್ ಎಸ್. ಅವರು ಈ ಕುರಿತು ನವೆಂಬರ್ 5, 2026 ರಂದು ಅಧಿಕೃತ ನಡವಳಿಗಳ ಆದೇಶ ಸಂಖ್ಯೆ: ಆಇ 10 ಎಸ್ಆರ್ಪಿ 2026 ಅನ್ನು ಬಿಡುಗಡೆ ಮಾಡಿದ್ದಾರೆ.
ಜುಲೈ 1 ರಿಂದಲೇ ಪೂರ್ವಾನ್ವಯ ಜಾರಿ
ಈ ಪರಿಷ್ಕೃತ ತುಟ್ಟಿಭತ್ಯೆ ದರಗಳು 2026ರ ಜುಲೈ 1 ರಿಂದ ಜಾರಿಗೆ ಬರುವಂತೆ ಪೂರ್ವಾನ್ವಯವಾಗಲಿವೆ. ಅಂದರೆ ಕಳೆದ ನಾಲ್ಕು ತಿಂಗಳ ಬಾಕಿ ಮೊತ್ತ (Arrears) ಸೇರಿದಂತೆ ಹೆಚ್ಚುವರಿ ಭತ್ಯೆಯು ನೌಕರರ ಕೈ ಸೇರಲಿದೆ. ಈ ಆದೇಶದನ್ವಯ ಲಭ್ಯವಾಗುವ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2026ರ ನವೆಂಬರ್ ತಿಂಗಳ ವೇತನ ಅಥವಾ ಪೆನ್ಷನ್ ವಿತರಣೆಯ ಮೊದಲೇ ನೌಕರರಿಗೆ ಪಾವತಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಯಾರೆಲ್ಲರಿಗೆ ಈ ಆದೇಶ ಅನ್ವಯಿಸುತ್ತದೆ?
ರಾಜ್ಯ ಸರ್ಕಾರದ ಪೂರ್ಣಾವಧಿ ನೌಕರರು: ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಖಾಯಂ ನೌಕರರು.
ನಿವೃತ್ತ ವೇತನದಾರರು ಮತ್ತು ಕುಟುಂಬ ಪೆನ್ಷನ್ದಾರರು: ರಾಜ್ಯ ಸರ್ಕಾರದ ನಿವೃತ್ತ ನೌಕರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು.
ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ: ಜಿಲ್ಲಾ ಪಂಚಾಯತ್ಗಳ ಪೂರ್ಣಾವಧಿ ನೌಕರರು ಮತ್ತು ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರು.
ವಿಶ್ವವಿದ್ಯಾಲಯಗಳ ಸಿಬ್ಬಂದಿ: ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರು.
ಯುಜಿಸಿ/ಎಐಸಿಟಿಇ/ಐಸಿಎಆರ್ ಸಿಬ್ಬಂದಿ: ಈ ವಿಶೇಷ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರು ಹಾಗೂ ನ್ಯಾಯಾಂಗ ಅಧಿಕಾರಿಗಳಿಗೂ ಸಹ ಇದು ಅನ್ವಯವಾಗುತ್ತದೆ.
ಮುಖ್ಯ ನಿಯಮಗಳು:
ತುಟ್ಟಿಭತ್ಯೆಯ ಉದ್ದೇಶಕ್ಕಾಗಿ ‘ಮೂಲ ವೇತನ’ ಎಂದರೆ ಸರ್ಕಾರಿ ನೌಕರನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ, ಸ್ಥಗಿತ ವೇತನ ಬಡ್ತಿ ಹಾಗೂ ವೈಯಕ್ತಿಕ ವೇತನಗಳನ್ನು ಮಾತ್ರ ಒಳಗೊಂಡಿರುತ್ತದೆ. ಇದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಪರಿಗಣಿಸುವಂತಿಲ್ಲ. ಈ ಆದೇಶದಿಂದಾಗಿ ರಾಜ್ಯ ಸರ್ಕಾರದ ಖಜಾನೆಗೆ ಹೆಚ್ಚುವರಿ ಹೊರೆ ಬೀಳಲಿದ್ದರೂ, ಹಬ್ಬದ ಸೀಸನ್ನಲ್ಲಿ ನೌಕರರ ಕೈಗೆ ಹೆಚ್ಚಿನ ಹಣ ಸಿಗುವುದರಿಂದ ಸರ್ಕಾರಿ ನೌಕರರ ವಲಯದಲ್ಲಿ ಭಾರಿ ಸಂತಸ ವ್ಯಕ್ತವಾಗಿದೆ.

