ಬೆಂಗಳೂರು: ಚಿತ್ರರಂಗದ ದೈತ್ಯ ನಟ, ಸೂಪರ್ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ (RR Nagar) ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಆತ್ಮೀಯ ಅಣ್ಣ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರನ್ನು ಭೇಟಿ ಮಾಡಿ, ಅವರ ಆರೋಗ್ಯದ ಸ್ಥಿತಿಗತಿಯನ್ನು ವಿಚಾರಿಸಿದರು.
ಸತ್ಯನಾರಾಯಣ ರಾವ್ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ರಜನಿಕಾಂತ್ ಅವರು ಅಣ್ಣನಿಗೆ ಧೈರ್ಯ ತುಂಬಿದ್ದಲ್ಲದೆ, ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದೊಂದಿಗೆ ಮಾತನಾಡಿ, ಆರೋಗ್ಯದ ಪ್ರಗತಿ ಹಾಗೂ ನೀಡಲಾಗುತ್ತಿರುವ ಸಮಗ್ರ ಚಿಕಿತ್ಸಾ (Integrative Medicine) ಪದ್ಧತಿಗಳ ಕುರಿತು ಮಾಹಿತಿ ಪಡೆದುಕೊಂಡರು.
ತಮ್ಮ ಬಿಡುವಿಲ್ಲದ ಚಿತ್ರೀಕರಣದ ವೇಳೆಯಲ್ಲೂ ರಜನಿಕಾಂತ್ ಅವರು ಬೆಂಗಳೂರಿಗೆ ಬಂದು ಅಣ್ಣನ ಆರೋಗ್ಯ ವಿಚಾರಿಸಿರುವುದು ಅವರ ನಡುವಿನ ಅಪಾರ ಒಡನಾಟಕ್ಕೆ ಸಾಕ್ಷಿಯಾಗಿದೆ. ಸೂಪರ್ಸ್ಟಾರ್ ಆಸ್ಪತ್ರೆಗೆ ಭೇಟಿ ನೀಡಿದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಆವರಣದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ನೆರೆದಿದ್ದರು.
Pic credit-Rashtrotthana Hospital & Research Centre

